ಕೊಲ್ಲಂ: 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಇಬ್ಬರೂ ಬಲಪಂಥದ ಗುಣಲಕ್ಷಣಗಳನ್ನು ಹೊಂದಿದ್ದಾರೆ' ಎಂದು ಸಿಪಿಐ(ಎಂ)ನ ಪಾಲಿಟ್‌ಬ್ಯೂರೊ ಸಂಯೋಜಕ ಪ್ರಕಾಶ್ ಕಾರಟ್ ಆರೋಪಿಸಿದ್ದಾರೆ.
ಪಕ್ಷದ ರಾಜ್ಯ ಘಟಕ ಆಯೋಜಿಸಿರುವ 4 ದಿನಗಳ ಸಮಾವೇಶದ ಮೊದಲದಿನವಾದ ಗುರುವಾರ ಅವರು ಮಾತನಾಡಿದರು.
'ಡೊನಾಲ್ಡ್ ಟ್ರಂಪ್ ಅವರು ಸಾಮ್ರಾಜ್ಯಶಾಹಿ ಮನಸ್ಥಿತಿಯುಳ್ಳವರಾಗಿದ್ದು, ಅಮೆರಿಕದ ಗಡಿಯನ್ನು ವಿಸ್ತರಿಸುವ ಮನಸ್ಥಿತಿ ಹೊಂದಿದ್ದಾರೆ. ಇತ್ತ ಮೋದಿ ಸರ್ಕಾರವು ಹಿಂದುತ್ವವಾದಿ ಕಾರ್ಪೊರೇಟ್ ಆಡಳಿತ ನಡೆಸುತ್ತಿದ್ದು, ನವ ಫ್ಯಾಸಿಸ್ಟ್ ಗುಣಲಕ್ಷಣಗಳನ್ನು ಹೊಂದಿದೆ' ಎಂದು ಆರೋಪಿಸಿದ್ದಾರೆ.
'ಅಮೆರಿಕದೊಂದಿಗಿನ ಸ್ನೇಹದಿಂದಾಗಿ ಪ್ಯಾಲೆಸ್ಟೀನ್ ಮೇಲಿನ ಆಕ್ರಮಣದಲ್ಲಿ ಇಸ್ರೇಲ್‌ಗೆ ಭಾರತವು ಶಸ್ತ್ರಾಸ್ತ್ರಗಳನ್ನು ಪೂರೈಸಿದೆ. ಅಮೆರಿಕದೊಂದಿಗೆ ಸೇರಿಕೊಂಡು ಭಾರತವು ಕ್ವಾಡ್ ಒಕ್ಕೂಟ ರಚಿಸಿದೆ. ಇದರಲ್ಲಿ ಜಪಾನ್ ಮತ್ತು ಆಸ್ಟ್ರೇಲಿಯಾ ಇದೆ. ಈ ಗುಂಪಿನ ಏಕೈಕ ಉದ್ದೇಶವೇ ಚೀನಾ ವಿರುದ್ಧ ಭದ್ರತಾ ಮೈತ್ರಿ ಮಾಡಿಕೊಳ್ಳುವುದಾಗಿದೆ. ಅಮೆರಿಕವು ಜಗತ್ತನ್ನು ಆಳುವ ನಿಟ್ಟಿನಲ್ಲಿ ಹೆಚ್ಚು ದಿಟ್ಟ ಹೆಜ್ಜೆಗಳನ್ನಿಡುತ್ತಿದ್ದರೆ, ಭಾರತವು ಅದಕ್ಕೆ ಸಹಕರಿಸುವ ಮೂಲಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ನೆರವಿಗೆ ಕತ್ತರಿ ಹಾಕಲು ಬೆಂಬಲಿಸುತ್ತಿದೆ' ಎಂದು ಆರೋಪಿಸಿದ್ದಾರೆ.
'ದೇಶದ ವಿದೇಶಾಂಗ ನೀತಿಯು ರಾಷ್ಟ್ರದ ಗುಣಲಕ್ಷಣದ ಪ್ರತಿಫಲನವಾಗಿದೆ. ಇದನ್ನು ರಾಜಕೀಯ ಭಾಷೆಯಲ್ಲಿ ಹಿಂದುತ್ವ ಕಾರ್ಪೊರೇಟ್ ಆಡಳಿತ ಎಂದು ಕರೆಯಬಹುದು. ಇದು ನವ ವಸಾಹತುಶಾಹಿ ಗುಣಲಕ್ಷಣವನ್ನು ಪ್ರದರ್ಶಿಸುತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್ ಅನ್ನು ನವ ವಸಾಹತುಶಾಹಿ ಸಂಸ್ಥೆಗಳು ಎಂದು ಜರಿಯುವ ಕೇರಳದ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧವೂ ಕಾರಟ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧದ ಹೋರಾಟ ಹಾಳು ಮಾಡುತ್ತಿರುವ ಕಾಂಗ್ರೆಸ್
'ನವ ವಸಾಹತುಶಾಹಿ ವ್ಯವಸ್ಥೆ ವಿರುದ್ಧದ ಎಡಪಕ್ಷಗಳ ಹೋರಾಟವನ್ನು ತನ್ನ ಕ್ಲುಲ್ಲಕ ರಾಜಕೀಯದಿಂದ ಕಾಂಗ್ರೆಸ್ ಹಾಳು ಮಾಡುತ್ತಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಹೋರಾಡಲು ನಮಗೆ ಕಾಂಗ್ರೆಸ್‌ನ ಪ್ರಮಾಣಪತ್ರದ ಅಗತ್ಯವಿಲ್ಲ' ಎಂದು ಗುಡುಗಿದ್ದಾರೆ.
'ಕಳೆದ ಹಲವು ವರ್ಷಗಳಿಂದ ಆರ್‌ಎಸ್‌ಎಸ್ ಕಾರ್ಯಕರ್ತರ ಕೈಯಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಹತರಾಗುತ್ತಿದ್ದಾರೆ. ಹಿಂದೆ ಬಳಕೆಯಲ್ಲಿದ್ದ ಸಾಂಪ್ರದಾಯಿಕ ವಸಹಾತುಶಾಹಿ ಪದ ಈಗಿಲ್ಲ. ತನ್ನ ರಾಜಕೀಯ ನಿರ್ಣಯಗಳಲ್ಲಿ ಸಿಪಿಐ(ಎಂ) ಇದೇ ಮೊದಲ ಬಾರಿಗೆ ನವ ವಸಾಹತುಶಾಹಿ ಪದ ಬಳಸುತ್ತಿದೆ. ಈಗಿರುವ ವಸಾಹತುಶಾಹಿ ವ್ಯವಸ್ಥೆ ಬದಲಾಗಿದೆ. ಇದರಲ್ಲಿ ನವ ಉದಾರವಾದಿತನ ಸೇರಿಕೊಂಡಿದೆ. ಭಾರತದಲ್ಲಿ ಆರ್‌ಎಸ್‌ಎಸ್‌ನ ವಿಶಿಷ್ಟ ಲಕ್ಷಣವಾದ ಹಿಂದುತ್ವ ಪರಿಕಲ್ಪನೆಯೂ ಬೆರೆತಿದೆ' ಎಂದು ಕಾರಟ್ ವಿಶ್ಲೇಷಿಸಿದ್ದಾರೆ.
'ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುತ್ತೇವೆ. ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುತ್ತೇವೆ ಎಂಬ ಹೇಳಿಕೆ ನೀಡಿರುವ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರವನ್ನು ಭೂಮಿ ಮೇಲಿನ ಏಕೈಕ ದೇಶ ಎಂದು ಭ್ರಮಿಸಿದ್ದಾರೆ. ಅದನ್ನು ಅವರು ಬಿಡಬೇಕು. ಇವರ ಶ್ರೇಷ್ಠತೆಗೆ ಚೀನಾದ ಬೆದರಿಕೆ ಇದೆ. ಯುರೋಪ್ ಅಮೆರಿಕ ನಿಯಂತ್ರಣದಲ್ಲಿರಬೇಕು ಎಂದು ಟ್ರಂಪ್ ಬಯಸುತ್ತಿದ್ದಾರೆ. ತೃತೀಯ ರಾಷ್ಟ್ರಗಳನ್ನು ತಿರಸ್ಕಾರದಿಂದ ನೋಡುತ್ತಿದ್ದಾರೆ. ಸರ್ಕಾರಿ ಕಚೇರಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಸೌಲಭ್ಯ ನೀಡುವ ಸಂಸ್ಥೆಗಳನ್ನು ಖಾಸಗಿಯವರ ಪಾಲು ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.
'ಜಗತ್ತಿನಲ್ಲಿ ಬಲಪಂಥ ಅನುಸರಿಸುವ ಗುಂಪುಗಳು ತಮ್ಮ ಬಾಹುಬಲವನ್ನು ಹೆಚ್ಚಿಸಿಕೊಳ್ಳುತ್ತಿವೆ. ಹಲವು ಭಾಗಗಳಲ್ಲಿ ಎಡಪಂಥ ಅನುಸರಿಸುವವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬಲ ಹಾಗೂ ನವ ವಸಾಹತುಶಾಹಿ ಪಡೆಯ ವಿರುದ್ಧ ಹೋರಾಡಲು ಎಡಪಂಥಕ್ಕೂ ಅವಕಾಶ ಸಿಗಲಿದೆ' ಎಂದು ಪ್ರಕಾಶ್ ಕಾರಟ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಿಪಿಐ(ಎಂ)ನ 24ನೇ ಕಾಂಗ್ರೆಸ್ ಏ. 2ರಿಂದ 6ರವರೆಗೆ ತಮಿಳುನಾಡಿನ ಮದುರೈನಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಕೊಲ್ಲಂನಲ್ಲಿ ನಡೆದ ಸಮಾವೇಶವು ಕೊನೆಯ ರಾಜ್ಯ ಸಮಾವೇಶವಾಗಿದೆ.