ನವದೆಹಲಿ: ಕೇಂದ್ರದ ಕ್ರೀಡಾ ಸಚಿವಾಲಯವು ಭಾರತೀಯ ಕುಸ್ತಿ ಒಕ್ಕೂಟದ(ಡಬ್ಲ್ಯುಎಫ್‌ಐ) ಮೇಲಿನ ನಿಷೇಧ ತೆಗೆದುಹಾಕಿದೆ. ಕುಸ್ತಿಗೆ ಸಂಬಂಧಿಸಿದ ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್‌ಎಸ್‌ಎಫ್) ಎಂಬ ಮಾನ್ಯತೆಯನ್ನು ಪುನಃಸ್ಥಾಪಿಸಿದೆ.
2023ರ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನಂದಿನಿ ನಗರದಲ್ಲಿ ಅಂಡರ್-15 ಮತ್ತು ಅಂಡರ್-20 ರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದಾಗಿ ಹೊಸದಾಗಿ ಆಯ್ಕೆಯಾಗಿದ್ದ ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್ ಘೋಷಿಸಿದ ನಂತರ ಕ್ರೀಡಾ ಸಚಿವಾಲಯ ಸಂಸ್ಥೆಯನ್ನು ಅಮಾನತುಗೊಳಿಸಿತ್ತು.
ಡಬ್ಲ್ಯುಎಫ್‌ಐನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹಿನ್ನೆಲೆಯಲ್ಲಿ 2023ರಿಂದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರಂತಹ ಹಲವಾರು ಖ್ಯಾತ ಕುಸ್ತಿಪಟುಗಳು ಪ್ರತಿಭಟನೆಗಳನ್ನು ನಡೆಸಿದ್ದರು.
ಕುಸ್ತಿಪಟುಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ನಿಗದಿತ ಸಮಯದೊಳಗೆ ಸಂಸ್ಥೆಯ ಚುನಾವಣೆಗಳನ್ನು ಆಯೋಜಿಸಲು ವಿಫಲವಾದ ಹಿನ್ನೆಲೆಯಲ್ಲಿ ಡಬ್ಯುಎಫ್‌ಐಗೆ 2023ರ ಆಗಸ್ಟ್‌ನಲ್ಲಿ, ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ನಿಷೇಧ ಹೇರಿತ್ತು. ಬಳಿಕ, ಅಂತರರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್‌ನಿಂದ(ಐಒಎ)ತಾತ್ಕಾಲಿಕ ಸಮಿತಿಯನ್ನು ಸ್ಥಾಪಿಸಲಾಗಿತ್ತು.
2023ರ ಡಿಸೆಂಬರ್ ಕೊನೆಯಲ್ಲಿ ಸಂಸ್ಥೆಗ ಚುನಾವಣೆ ನಡೆದು, ಸಂಜಯ್ ಸಿಂಗ್ ಅವರನ್ನು ಡಬ್ಲ್ಯುಉಎಫ್‌ಐನ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಕುಸ್ತಿಪಟುಗಳು ಅವರ ಆಯ್ಕೆಯ ವಿರುದ್ಧ ಪ್ರತಿಭಟಿಸಿದ್ದರು. ಅಂಜಯ್ ಸಿಂಗ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಆಪ್ತ ಎಂದು ಹೇಳಿದ್ದರು. ಚುನಾವಣೆಯ ಕೆಲವು ದಿನಗಳ ನಂತರ, ಸಚಿವಾಲಯವು ಮತ್ತೆ ಕುಸ್ತಿ ಫೆಡರೇಶನ್ ಅನ್ನು ಅಮಾನತುಗೊಳಿಸಿತ್ತು. ಸಂಸ್ಥೆಯ ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ತಾತ್ಕಾಲಿಕ ಸಮಿತಿಯನ್ನು ಮತ್ತೊಮ್ಮೆ ಸ್ಥಾಪಿಸಲಾಗಿತ್ತು.
ಡಬ್ಲ್ಯುಎಫ್‌ಐ ಮೇಲಿನ ನಿಷೇಧವನ್ನು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ತೆಗೆದುಹಾಕಿದ್ದು, ಭವಿಷ್ಯದ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಹೀಗಾಗಿ, ತಾತ್ಕಾಲಿಕ ಸಮಿತಿ ಅಗತ್ಯವಿಲ್ಲ ಎಂದು ಐಒಎ ಹೇಳಿದ ನಂತರ ಇದೇ ತಿಂಗಳಲ್ಲಿ ತಾತ್ಕಾಲಿಕ ಸಮಿತಿಯನ್ನು ವಿಸರ್ಜಿಸಲಾಗಿತ್ತು. ಕಳೆದ ವರ್ಷ ಫೆಬ್ರುವರಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಡಬ್ಲ್ಯುಎಫ್‌ಐ ಮೇಲಿನ ನಿಷೇಧವನ್ನು ಯುಡಬ್ಲ್ಯುಡಬ್ಲ್ಯು ತೆಗೆದುಹಾಕಿತ್ತು.