ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ವ್ಯಾಪ್ತಿಯ ಜೇಳಂ ನದಿಯಲ್ಲಿ ತೆಲುತ್ತಿದ್ದ ಇಬ್ಬರು ಭಾರತೀಯರ ಮೃತದೇಹಗಳನ್ನು ಭಾರತೀಯ ಅಧಿಕಾರಿಗಳಿಗೆ ಪಿಒಕೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಬುಗ್ರಾನ್ ಪ್ರದೇಶದ ಯಾಸಿರ್ ಹುಸೈನ್ ಶಾ ಮತ್ತು ಕುಂಡಿ ಬರ್ಜಾಲಾ ಪ್ರದೇಶದ ಆಸಿಯಾ ಬಾನೋ ಎಂದು ಗುರುತಿಸಲಾಗಿದೆ.
ಯಾಸಿರ್ ಹುಸೈನ್ ಮತ್ತು ಸಿಯಾ ಬಾನೋ, ಮಾರ್ಚ್ 5ರಿಂದ ನಾಪತ್ತೆಯಾಗಿದ್ದರು. ಗಡಿ ನಿಯಂತ್ರಣ ರೇಖೆಯ ಸಮೀಪದ ದುಲಂಜಾ ಗ್ರಾಮ ವ್ಯಾಪ್ತಿಯ ನದಿಗೆ ಹಾರಿದ್ದಾರೆಂದು ವರದಿಯಾಗಿದೆ.
ಪೊಲೀಸರು ಮತ್ತು ರಕ್ಷಣಾ ತಂಡಗಳು ಶವಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಿದ್ದರು. ಆನೀರಿನ ಪ್ರವಾಹದಲ್ಲಿ ಮೃತದೇಹಗಳು ಪಿಒಕೆ ಪ್ರದೇಶ ನದಿಗೆ ಕೊಚ್ಚಿಕೊಂಡು ಹೋಗಿದ್ದವು.
ಈ ಬಗ್ಗೆ ಪಿಒಕೆ ಅಧಿಕಾರಿಗಳಿಗೆ ಭಾರತೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯ ಮೂಲಕ ಮೃತದೇಹಗಳನ್ನು ಹೊರತೆಗೆದ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಇಂದು (ಶನಿವಾರ) ಉರಿ ಪ್ರದೇಶದಲ್ಲಿ ಸಭೆ ನಡೆಸಿ, ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ಈ ವೇಳೆ ಉಭಯ ರಾಷ್ಟ್ರಗಳ ಅಧಿಕಾರಿಗಳು, ಮೃತರ ಪೋಷಕರು ಸೇರಿದಂತೆ ವೈದ್ಯರು ಸ್ಥಳದಲ್ಲಿದ್ದರು.