ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ಇತ್ತೀಚಿಗೆ ನಡೆದ ರೈಲು ಅಪಹರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಅಫ್ಗಾನಿಸ್ತಾನದ ಮುಂದೆ ಪ್ರಬಲ ಪ್ರತಿಭಟನೆ ದಾಖಲಿಸಿದೆ.
'ಈ ಸಂಬಂಧ ಅಫ್ಗಾನಿಸ್ತಾನದ ಹಿರಿಯ ರಾಯಭಾರಿಯನ್ನು ಸೋಮವಾರ ತನ್ನ ವಿದೇಶಾಂಗ ಕಚೇರಿಗೆ ಕರೆಸಿಕೊಂಡ ಪಾಕಿಸ್ತಾನವು ಪ್ರತಿಭಟನೆ ದಾಖಲಿಸಿದೆ' ಎಂದು ಮೂಲವನ್ನು ಉಲ್ಲೇಖಿಸಿ 'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.
ಆದರೆ, ಅಫ್ಗಾನಿಸ್ತಾನದ ರಾಯಭಾರಿಯನ್ನು ಕರೆಸಿಕೊಂಡ ಕುರಿತು ವಿದೇಶಾಂಗ ಕಚೇರಿ ಅಧಿಕೃತ ಹೇಳಿಕೆ ನೀಡಿಲ್ಲ.
'ಈ ದಾಳಿ ನಡೆಸಿದ್ದ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಜೊತೆಗೆ ಅಫ್ಗಾನಿಸ್ತಾನ ಯಾವುದೇ ಸಂಪರ್ಕ ಹೊಂದಿಲ್ಲ. ಕಾಬೂಲ್ ಜತೆಗೂ ಯಾವುದೇ ಸಂಬಂಧ ಹೊಂದಿಲ್ಲ ಎಂದು ಪಾಕಿಸ್ತಾನದ ಅಧಿಕಾರಿಗಳಿಗೆ ರಾಯಭಾರಿಯು ಹೇಳಿದ್ದಾರೆ' ಎಂದು ತಿಳಿದುಬಂದಿದೆ.
ಮಾರ್ಚ್ 11ರಂದು ಕ್ವೆಟ್ಟಾದಿಂದ ಪೆಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲು ಅಪಹರಿಸಿದ್ದ ಬಲೂಚಿಸ್ತಾನ ಭಯೋತ್ಪಾದಕರು 400 ಪ್ರಯಾಣಿಕರನ್ನು 30 ಗಂಟೆಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದರು. ಪಾಕಿಸ್ತಾನ ಸೇನೆಯು ನಡೆಸಿದ ಕಾರ್ಯಾಚರಣೆಯಲ್ಲಿ 350 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿತ್ತು. ಸೇನಾ ಕಾರ್ಯಾಚರಣೆ ಆರಂಭವಾಗುವ ಮುನ್ನವೇ, ಭಯೋತ್ಪಾದಕರು 25 ಪ್ರಯಾಣಿಕರನ್ನು ಹತೈಗೈದಿದ್ದರು. ಕಾರ್ಯಾಚರಣೆಯಲ್ಲಿ 33 ಮಂದಿ ಮೃತಪಟ್ಟಿದ್ದರು.