ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಲೆ ದಾಳಿ ನಡೆಸುವ ಮೂಲಕ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಬಂಡುಕೋರರು ಸುಮಾರು 400 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು ಪ್ರತ್ಯೇಕ ರಾಷ್ಟ್ರ ನಿರ್ಮಾಣಕ್ಕಾಗಿ ಪಾಕಿಸ್ತಾನ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದಿಂದ ಪೆಶಾವರಕ್ಕೆ ತೆರಳುತ್ತಿದ್ದ ಒಂಬತ್ತು ಬೋಗಿಗಳಿರುವ ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸುಮಾರು 400 ಜನ ಪ್ರಯಾಣಿಸುತ್ತಿದ್ದರು. ಗಡಾಲರ್ ಕಣಿವೆ ಪ್ರದೇಶದ ಸಮೀಪದ ಸುರಂಗದಲ್ಲಿ ಬಿಎಲ್‌ಎ ಉಗ್ರರು ರೈಲ್ವೆ ಹಳಿಯನ್ನು ಸ್ಫೋಟಿಸಿ ರೈಲನ್ನು ಹೈಜಾಕ್ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪಾಕಿಸ್ತಾನ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿಯವರೆಗೂ (ಮಾರ್ಚ್ 12, ಮಧ್ಯಾಹ್ನ 4 ಗಂಟೆ) 400 ಜನರ ಪೈಕಿ 155 ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, 27 ಉಗ್ರರನ್ನು ಸೇನೆ ಹತ್ಯೆ ಮಾಡಿದೆ ಎಂದು ವರದಿಯಾಗಿದೆ. ಸದ್ಯ ಸುರಂಗವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.
ಬಲೂಚಿ ಬಂಡುಕೋರರು ಯಾರು? ಅವರ ಉದ್ದೇಶವೇನು? ಈ ಹೈಜಾಕ್‌ಗೆ ಕಾರಣ ಏನು ಎಂಬುದರ ಬಗ್ಗೆ ತಿಳಿಯೋಣ...
ಪಾಕಿಸ್ತಾನ, ಇರಾನ್ ಹಾಗೂ ಅಫ್ಗಾನಿಸ್ತಾನದಲ್ಲಿ ಬಲೂಚಿಸ್ತಾನ ಪ್ರಾಂತ್ಯ ಹರಡಿಕೊಂಡಿದೆ. ಇಲ್ಲಿ ಬಲೂಚಿ ಸಮುದಾಯದವರು ವಾಸ ಮಾಡುತ್ತಿದ್ದು ಅವರನ್ನು ಬಲೂಚಿಗಳು ಎಂದು ಕರೆಯುತ್ತಾರೆ. ಇರಾನ್, ಅಫ್ಗಾನಿಸ್ತಾನದಲ್ಲಿರುವ ಪ್ರಾಂತ್ಯಗಳಿಗೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಇರುವ ಬಲೂಚಿ ಪ್ರಾಂತ್ಯ ದೊಡ್ಡದಾಗಿದೆ.
ಇರಾನ್‌ನ ಸಿಸ್ತಾರ್, ಅಫ್ಗಾನಿಸ್ತಾನದ ಖೈಬರ್ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಲೂಚಿ ಸಮುದಾಯದವರು ವಾಸಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ಈ ಸಮುದಾಯದವರು ಕಣಿವೆ, ಗುಡ್ಡಗಾಡು ಪ್ರಾಂತ್ಯಗಳಲ್ಲಿ ವಾಸಿಸುತ್ತಿದ್ದಾರೆ.
ಈ ಮೂರು ದೇಶಗಳಲ್ಲಿರುವ ಬಲೂಚಿಗಳ ಜನ ಸಂಖ್ಯೆ 1 ಕೋಟಿ ಇದೆ. ಪಾಕಿಸ್ತಾನದಲ್ಲೇ ಸುಮಾರು 70 ಲಕ್ಷ ಜನರು ವಾಸ ಮಾಡುತ್ತಿದ್ದಾರೆ. ಸಂಘಟಿತರಾಗಿರುವ ಬಲೂಚಿಗಳು ತಾವು ವಾಸಿಸುತ್ತಿರುವ ಪ್ರಾಂತ್ಯಕ್ಕೆ (ಇರಾನ್-ಅಫ್ಗಾನ್ ಸೇರಿ) ಪ್ರತ್ಯೇಕ ದೇಶದ ಸ್ಥಾನಮಾನ ಸಿಗಬೇಕೆಂದು ಐದು ದಶಕಗಳಿಂದ ಹೋರಾಡುತ್ತಿದ್ದಾರೆ. ಈ ಹೋರಾಟಕ್ಕೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಎಂಬ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ.
ವಿಧ್ವಂಸಕ ಕೃತ್ಯಗಳನ್ನು ನಡೆಸುವ ಮೂಲಕ ಪ್ರತ್ಯೇಕ ದೇಶಕ್ಕಾಗಿ ಅವರು ಹೋರಾಡುತ್ತಿದ್ದಾರೆ. ಅವರು ಪಾಕಿಸ್ತಾನದಲ್ಲಿ ಹಲವಾರು ದಾಳಿಗಳನ್ನು ನಡೆಸಿ ನೂರಾರು ಜನರ ಸಾವಿಗೆ ಕಾರಣರಾಗಿದ್ದಾರೆ.
ಒತ್ತೆಯಾಳುಗಳಾಗಿದ್ದ ನಾಗರಿಕರು
ಬಲೂಚಿಸ್ತಾನ ಲಿಬರೇಷನ್ ಆರ್ಮಿ ಹುಟ್ಟಿದ್ದು ಹೇಗೆ?
70ರ ದಶಕದಲ್ಲಿ ಖಾನ್ ಎಂಬ ರಾಜ ಬಲೂಚಿಸ್ತಾನ ಪ್ರಾಂತ್ಯವನ್ನು ಆಳ್ವಿಕೆ ಮಾಡುತ್ತಿದ್ದ. 1971ರಲ್ಲಿ ಅಂದಿನ ಪಾಕ್ ಪ್ರಧಾನಿ ಜಲ್ಫೀಕರ್ ಅಲಿ ಬಲೂಚಿಸ್ತಾನದಲ್ಲಿದ್ದ ರಾಜನ ಆಡಳಿತವನ್ನು ವಿಸರ್ಜನೆಗೊಳಿಸಿ ಪಾಕಿಸ್ತಾನ ಸರ್ಕಾರದ ಆಡಳಿತ ಜಾರಿಗೊಳಿಸಿದರು. ಇದರಿಂದ ಕುಪಿತಗೊಂಡ ಸ್ಥಳೀಯರು ಹೋರಾಟಕ್ಕೆ ಮುಂದಾದರು. ಸೇನಾ ಕಾರ್ಯಾಚರಣೆಗಳ ಮೂಲಕ ಬಲೂಚಿಗಳ ಹೋರಾಟವನ್ನು ಹತ್ತಿಕ್ಕಲಾಯಿತು.
ಈ ಹಂತದಲ್ಲಿ ಬಲೂಚಿಸ್ತಾನ ಪ್ರತ್ಯೇಕತೆಯ ಹೋರಾಟ ಆರಂಭವಾಯಿತು. ನಂತರ ಮಜೀದ್ ಹಾಗೂ ಲ್ಯಾಂಗೋವ್ ಸಹೋದರರು ಬಲೂಚಿಸ್ತಾನ ಲಿಬರೇಷನ್ ಆರ್ಮಿ ಹುಟ್ಟುಹಾಕಿದರು. ಈ ಅರ್ಮಿ 2000ನೇ ವರ್ಷದ ನಂತರದಲ್ಲಿ ಸಕ್ರಿಯಗೊಂಡು ಪಾಕ್ ಸೇನೆ ಹಾಗೂ ನಾಗರೀಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಆರಂಭಿಸಿತು.
2011ರಲ್ಲಿ ಮೊದಲ ಬಾರಿಗೆ ಆತ್ಮಹತ್ಯಾ ದಾಳಿ ನಡೆಸಿ ಹತ್ತಾರು ಜನರ ಸಾವಿಗೆ ಕಾರಣವಾಯಿತು. 2012, 2013, 2016 ಹಾಗೂ 2018ರಲ್ಲಿ ವ್ಯಾಪಕ ದಾಳಿ ನಡೆಸಿತ್ತು. ಕೋವಿಡ್ ನಂತರ ತಟಸ್ಥರಾಗಿದ್ದ ಈ ಉಗ್ರರು ಇದೀಗ ರೈಲನ್ನು ಹೈಜಾಕ್ ಮಾಡುವ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ.
ಸೇನಾ ಕಾರ್ಯಾಚರಣೆ
ಪ್ರತ್ಯೇಕ ದೇಶ ಸ್ಥಾಪನೆ ಬಿಎಲ್‌ಎ ಮುಖ್ಯ ಉದ್ದೇಶ...
ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅನೇಕ ಖನಿಜ ನಿಕ್ಷೇಪಗಳು, ತೈಲ ಬಾವಿಗಳು ಇದ್ದು ಸಾಕಷ್ಟು ನೈಸರ್ಗಿಕ ಸಂಪತ್ತನ್ನು ಒಳಗೊಂಡಿದೆ. ಇಷ್ಟೆಲ್ಲಾ ಸಂಪತ್ತು ಇದ್ದರೂ ನಮ್ಮ ಪ್ರಾಂತ್ಯದಲ್ಲಿನ ಜನರು ದಶಕಗಳಿಂದ ಬಡವರಾಗಿಯೇ ಉಳಿದಿದ್ದಾರೆ. ಹಾಗಾಗಿ, ಪಾಕಿಸ್ತಾನದ ಹಿಡಿತದಿಂದ ತಮ್ಮ ಪ್ರಾಂತ್ಯವನ್ನು ರಕ್ಷಿಸಿ, ಪ್ರತ್ಯೇಕ ದೇಶ ಸ್ಥಾಪಿಸಲು ನಿರ್ಧರಿಸಿರುವುದಾಗಿ ಬಿಎಲ್‌ಎ ಹೇಳಿದೆ.
ಇರಾನ್, ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಹರಿಡಿಕೊಂಡಿರುವ ನಮ್ಮ ಪ್ರಾಂತ್ಯವನ್ನು ಒಟ್ಟುಗೂಡಿಸಿ ಬಲೂಚಿಸ್ತಾನ ದೇಶ ಸ್ಥಾಪನೆ ಮಾಡುವುದು ನಮ್ಮ ಅಚಲವಾದ ಗುರಿ ಎಂದು ಬಿಎಲ್‌ಎ ವಕ್ತಾರರು ಹೇಳುತ್ತಿದ್ದಾರೆ.
ವಿದೇಶಗಳಿಂದ ಬಿಎಲ್‌ಎಗೆ ಮದ್ದುಗುಂಡಗಳ ಸರಬರಾಜು?
ಬಲೂಚಿ ಬಂಡುಕೋರರಿಗೆ ವಿವಿಧ ದೇಶಗಳಿಂದ ಅಕ್ರವಾಗಿ ಬಂದೂಕು, ಬಾಂಬ್‌ಗಳು, ರಾಕೇಟ್‌ಗಳು ಸೇರಿದಂತೆ ವ್ಯಾಪಕವಾಗಿ ಮದ್ದು ಗುಂಡುಗಳು ಸರಬರಾಜುಗುತ್ತಿವೆ. ಮಧ್ಯಪ್ರಾಚ್ಯದಿಂದ ಇವು ಸರಬರಾಜುಗುತ್ತಿವೆ ಎಂದು ಪಾಕ್ ಸರ್ಕಾರ ಹೇಳಿದೆ.