ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಅಸಭ್ಯ ಹೇಳಿಕೆಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಇಬ್ಬರು ಪತ್ರಕರ್ತೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಪಲ್ಸ್ ಟಿವಿಯ ಸಿಇಒ, ಪತ್ರಕರ್ತೆ ರೇವತಿ ಹಾಗೂ ವರಿದಿಗಾರ್ತಿ ಸಂಧ್ಯಾ ಅಲಿಯಾಸ್ ತನ್ವಿ ಯಾದವ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬರನ್ನು ಸಂದರ್ಶನ ಮಾಡಲಾಗಿದ್ದು ಅದರಲ್ಲಿ ಆ ವ್ಯಕ್ತಿ ರೇವಂತ್ ರೆಡ್ಡಿ ವಿರುದ್ಧ ಅಸಭ್ಯ ಮಾತುಗಳನ್ನು ಹೇಳಿದ್ದರು. ಹಾಗೇ ಬಿಆರ್‌ಎಸ್ ಪಕ್ಷದ ಕಚೇರಿಯಲ್ಲಿ ವ್ಯಕ್ತಿಯೊಬ್ಬರನ್ನು ಸಂದರ್ಶನ ಮಾಡಲಾಗಿತ್ತು. ಅಲ್ಲಿಯೂ ರೇವಂತ್ ರೆಡ್ಡಿಯವರನ್ನು ಅಸಭ್ಯವಾಗಿ ನಿಂಧನೆ ಮಾಡಲಾಗಿತ್ತು.
ಈ ಎರಡು ವಿಡಿಯೊಗಳನ್ನು ಪಲ್ಸ್ ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಘಟನೆ ಸಂಬಂಧ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯ ಕಾರ್ಯದರ್ಶಿ ಕೈಲಾಶ್ ದೂರು ನೀಡಿದ್ದರು.
ಈ ಎರಡು ವಿಡಿಯೊಗಳನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿತ್ತು ಎಂದು ಪೊಲೀಸರು ತನಿಖೆ ವೇಳೆ ಪತ್ತೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರು ಪತ್ರಕರ್ತೆಯರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಂಗ ಬಂಧನ: ಮಾದಾಪುರದಲ್ಲಿರುವ ಟಿವಿ ಕಚೇರಿಯಿಂದ 2 ಲ್ಯಾಪ್‌ಟಾಪ್‌ಗಳು, 2 ಹಾರ್ಡ್ ಡಿಸ್ಕ್‌ಗಳು, ಲೋಗೊ, ರೌಟರ್ ಹಾಗೂ 7 ಸಿಪಿಯುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ರೇವತಿ ಹಾಗೂ ಸಂಧ್ಯಾ ಅವರನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅವರನ್ನು ಚಂಚಲಗೂಡ ಜೈಲಿಗೆ ಕಳುಹಿಸಲಾಗಿದೆ.