ಢಾಕಾ: ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ 72 ಮಂದಿ ವಿರುದ್ಧ ಇಲ್ಲಿನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹಾಗೂ ಮಾಧ್ಯಮಗಳು ವರದಿ ಮಾಡಿವೆ.
'ಅಸ್ತಿತ್ವದಲ್ಲಿರುವ ಸರ್ಕಾರ ಉರುಳಿಸಲು ಸಂಚು ರೂಪಿಸಿದ ಆರೋಪದ ಮೇಲೆ ಸಿಐಡಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡ ಢಾಕಾ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್, ಈ ಕುರಿತು ತನಿಖೆ ನಡೆಸುವಂತೆ ಸಿಐಡಿಗೆ ಸೂಚನೆ ನೀಡಿದೆ.
2024ರ ಡಿ.19ರಂದು 'ಜೈ ಬಾಂಗ್ಲಾ ಬ್ರಿಗೇಡ್' ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಸಭೆ ಸೇರಿದ್ದವರು ಅಂತರ್ಯುದ್ಧದ ಮೂಲಕ ಹಸೀನಾ ಅವರ ಸರ್ಕಾರವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ ಕುರಿತು ಧ್ವನಿಮುದ್ರಣ ಆಧರಿಸಿ ಸಿಐಡಿ ಪ್ರಕರಣ ದಾಖಲಿಸಿದೆ.