ನವದೆಹಲಿ: ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ಸಮಯದಲ್ಲಿ ನೀರಿನ ಗುಣಮಟ್ಟವು ಸ್ನಾನಕ್ಕೆ ಯೋಗ್ಯವಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಹೊಸ ವರದಿ ಹೇಳಿದೆ.
ಈ ಕುರಿತು ಸಿದ್ಧಪಡಿಸಿರುವ ಅಂಕಿ ಅಂಶಗಳಿಂದ ಕೂಡಿದ ವಿಶ್ಲೇಷಣಾತ್ಮಕ ವರದಿಯನ್ನು ಮಂಡಳಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಸಲ್ಲಿಸಿದೆ.
ನಿರ್ದಿಷ್ಟ ಸ್ಥಳಗಳಲ್ಲಿ ವಿಭಿನ್ನ ದಿನಗಳಂದು ಹಾಗೂ ಬೇರೆ ಬೇರೆ ಸ್ಥಳಗಳಲ್ಲಿ ನಿರ್ದಿಷ್ಟ ದಿನಗಳಂದು ಸಂಗ್ರಹಿಸಲಾದ ನೀರಿನ ಮಾದರಿಯ ದತ್ತಾಂಶ ವಿಶ್ಲೇಷಿಸಲಾಗಿದೆ ಎಂದು ಹೇಳಿರುವ ಮಂಡಳಿಯು, ಇದು ಒಟ್ಟಾರೆ ನದಿ ನೀರಿನ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ ಎಂದೂ ತಿಳಿಸಿದೆ.
ಮಂಡಳಿಯು ಈ ವರದಿಯನ್ನು ಫೆಬ್ರುವರಿ 28ರಂದು ಸಿದ್ಧಪಡಿಸಿದ್ದು, ಮಾರ್ಚ್ 7ರಂದು ಎನ್‌ಜಿಟಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಿಪಿಸಿಬಿ ಜನವರಿ 12ರಿಂದ ಗಂಗಾನದಿಯ ಐದು ಮತ್ತು ಯಮುನಾ ನದಿಯ ಎರಡು ಸ್ಥಳಗಳಲ್ಲಿ ವಾರಕ್ಕೆ ಎರಡು ಬಾರಿ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿರುವುದಾಗಿ ಹೇಳಿದೆ.
ನಿರ್ದಿಷ್ಟ ಸ್ಥಳದಲ್ಲಿ ಬೇರೆ ಬೇರೆ ದಿನಗಳಂದು ತೆಗೆದುಕೊಂಡ ಮಾದರಿಗಳಲ್ಲಿ ಕರಗಿದ ಆಮ್ಲಜನಕ (ಬಿಡಿಒ) ಪ್ರಮಾಣ, ಜೀವರಾಸಾಯನಿಕ ಆಮ್ಲಜನಕ ಬೇಡಿಕೆ (ಬಿಒಡಿ) ಮತ್ತು ಫೀಕಲ್ ಕೋಲಿಫಾರ್ಮ್ ಕೌಂಟ್‌ನಲ್ಲಿ (ಎಫ್‌ಸಿ) ಗಮನಾರ್ಹ ವ್ಯತ್ಯಾಸ ಕಂಡು ಬಂದಿದೆ. ಅದೇ ರೀತಿ ನಿರ್ದಿಷ್ಟ ದಿನದಂದು ಬೇರೆ ಬೇರೆ ಸ್ಥಳಗಳಲ್ಲಿ ತೆಗೆದುಕೊಂಡ ಮಾದರಿಗಳಲ್ಲೂ ವ್ಯತ್ಯಾಸಗಳು ಕಂಡು ಬಂದಿವೆ ಎಂದು ಮಂಡಳಿ ಪ್ರಸ್ತಾಪಿಸಿದೆ.
ನೀರಿನಲ್ಲಿರುವ ಆಮ್ಲಜನಕದ ಪ್ರಮಾಣದ ಕುರಿತು 'ಡಿಒ' ಹೇಳಿದರೆ, ಜಲಕಾಯಗಳಲ್ಲಿರುವ ಸಾವಯವ ಪದಾರ್ಥಗಳನ್ನು ವಿಭಜಿಸಲು ಸೂಕ್ಷ್ಮಾಣು ಜೀವಿಗಳಿಗೆ ಅಗತ್ಯವಿರುವ ಆಮ್ಲಜನಕ ಪ್ರಮಾಣ ಕುರಿತು 'ಬಿಒಡಿ' ತಿಳಿಸುತ್ತದೆ. ಒಳಚರಂಡಿ ನೀರಿನ ಸೇರ್ಪಡೆಯಿಂದ ಆಗಿರುವ ಮಾಲಿನ್ಯದ ಪ್ರಮಾಣವನ್ನು 'ಎಫ್‌ಸಿ' ತಿಳಿಸುತ್ತದೆ.
ನಿರ್ದಿಷ್ಟ ಮಿತಿಯಲ್ಲಿವೆ:
ಜನವರಿ 12ರಿಂದ ಫೆಬ್ರುವರಿ 22ರವರೆಗೆ ಸಾಮೂಹಿಕ ಸ್ನಾನದ 10 ಸ್ಥಳಗಳಲ್ಲಿ ನೀರಿನ ಗುಣಮಟ್ಟದ ವಿಶ್ಲೇಷಣೆ ನಡೆಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದತ್ತಾಂಶಗಳ ವಿಶ್ಲೇಷಣೆ ಪ್ರಕಾರ, 'ಡಿಒ', 'ಬಿಒಡಿ' ಮತ್ತು 'ಎಫ್‌ಸಿ'ಗಳ ಸರಾಸರಿ ಮೌಲ್ಯವು ಅನುಮತಿಸಬಹುದಾದ ಮಿತಿಗಳಲ್ಲಿವೆ ಎಂದು ವರದಿಯಲ್ಲಿ ಮಂಡಳಿ ತಿಳಿಸಿದೆ.
ಎಫ್‌ಸಿ ಮೌಲ್ಯವು 1,400 ಯೂನಿಟ್ (100 ಎಂ.ಎಲ್ ನೀರಿನಲ್ಲಿ 2,500 ಯೂನಿಟ್‌ಗಳವರೆಗೆ ಇರಬಹುದು), ಡಿಒ 8.7 ಮಿಲಿಗ್ರಾಂ (1 ಲೀಟರ್‌ನಲ್ಲಿ 5 ಮಿಲಿಗ್ರಾಂಗಿಂತ ಹೆಚ್ಚಿರಬೇಕು) ಮತ್ತು ಬಿಒಡಿ ಪ್ರಮಾಣವು 2.5 ಮಿ.ಗ್ರಾಂನಷ್ಟಿತ್ತು (ಪ್ರತಿ ಲೀಟರ್‌ಗೆ 3 ಮಿ.ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಇರಬೇಕು) ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಪ್ರಯಾಗರಾಜ್‌ನಲ್ಲಿ ವಿವಿಧ ಸ್ಥಳಗಳಲ್ಲಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ' ಎಂದು ಮಂಡಳಿ ಫೆಬ್ರುವರಿ 17ರಂದು ನ್ಯಾಯಮಂಂಡಳಿಗೆ ವರದಿ ಸಲ್ಲಿಸಿತ್ತು. ಮಂಡಳಿಯು ಈ ವಿಷಯ ಕುರಿತು ವಿಚಾರಣೆಯನ್ನು ಏಪ್ರಿಲ್ 7ರಂದು ತೆಗೆದುಕೊಳ್ಳಲಿದೆ.