ಅಮೆರಿಕದ ಒತ್ತೆಯಾಳುಗಳ ಬಿಡುಗಡೆಗೆ ಒತ್ತು ನೀಡಿ, 'ಉಗ್ರಗಾಮಿ ಸಂಘಟನೆ' ಎಂದು ತಾನು ಹೇಳುವ ಹಮಾಸ್ ಬಂಡುಕೋರರ ಜೊತೆಗಿನ ಚರ್ಚೆಯನ್ನು ಅಮೆರಿಕ ಈ ಮೂಲಕ ದೃಢಪಡಿಸಿದೆ.
ಕದನ ವಿರಾಮ ಘೋಷಣೆ ಕುರಿತಂತೆ ಇಸ್ರೇಲ್‌ಗೆ ಬೆಂಬಲವಾಗಿ ನಿಂತಿರುವ ಟ್ರಂಪ್ ಅವರು, 'ನಿಗದಿತ ಗುರಿ ಸಾಧಿಸಲು ಅಗತ್ಯವಿರುವ ಎಲ್ಲ ನೆರವನ್ನು ಒದಗಿಸಲಾಗುವುದು' ಎಂದು ಭರವಸೆ ನೀಡಿದ್ದಾರೆ.
'ಎಲ್ಲ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಿ. ನೀವು ಹತ್ಯೆ ಮಾಡಿದ ಎಲ್ಲರ ಶವಗಳನ್ನು ಒಪ್ಪಿಸಿ. ಇಲ್ಲದಿದ್ದರೆ, ನಿಮ್ಮ ಕಥೆ ಮುಗಿದಂತೆಯೇ' ಟ್ರಂಪ್ ಜಾಲತಾಣದ ಮೂಲಕ ಎಚ್ಚರಿಸಿದ್ದಾರೆ.
ಬಿಡುಗಡೆಯಾದ ಒತ್ತೆಯಾಳುಗಳ ಜೊತೆಗೆ ಚರ್ಚಿಸಿದ ಅವರು, 'ಇದು, ನಿಮಗೆ ಕಡೆಯ ಎಚ್ಚರಿಕೆ. ಗಾಜಾ ತೊರೆಯಲು ಸಕಾಲ. ನಿಮಗೆ ಇನ್ನೂ ಅವಕಾಶವಿದೆ' ಎಂದು ಹಮಾಸ್ ನಾಯಕರಿಗೆ ತಿಳಿಸಿದ್ದಾರೆ.
'ಗಾಜಾದ ನಿವಾಸಿಗಳೇ ನಿಮಗೆ ಸುಂದರ ಭವಿಷ್ಯವಿದೆ. ಆದರೆ, ಒತ್ತೆಯಾಳುಗಳು ನಿಮ್ಮ ಹಿಡಿತದಲ್ಲೇ ಇದ್ದರೆ ಅದು ಅಸಾಧ್ಯ. ಒತ್ತೆಯಾಳುಗಳು ನಿಮ್ಮ ಹಿಡಿತದಲ್ಲಿದ್ದರೆ ನೀವು ಸತ್ತಂತೆಯೇ' ಎಂದಿದ್ದಾರೆ.
'ನೀವು ಊಹಿಸಲಾಗದ ಪರಿಣಾಮಗಳನ್ನು ಎದುರಿಸಬೇಕಾದಿತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ ಹಿಂದೆಯೇ ಟ್ರಂಪ್ ಈ ಮಾತು ಹೇಳಿದ್ದಾರೆ.
ಮಾತುಕತೆಯೇ ಬಿಡುಗಡೆಗೆ ಇರುವ ಮಾರ್ಗ: ಹಮಾಸ್
ಕೈರೊ: ಡೊನಾಲ್ಡ್ ಟ್ರಂಪ್ ಎಚ್ಚರಿಕೆಯನ್ನು ತಳ್ಳಿಹಾಕಿರುವ ಹಮಾಸ್ ಬಂಡುಕೋರರು 'ದೀರ್ಘಾವಧಿ ಕದನವಿರಾಮ ಘೋಷಿಸಿದರಷ್ಟೇ ಉಳಿದಿರುವ ಒತ್ತೆಯಾಳುಗಳ ಬಿಡುಗಡೆ ಮಾಡಲಾಗುವುದು' ಎಂದು ಸ್ಪಷ್ಟಪಡಿಸಿದೆ.
ಎಚ್ಚರಿಕೆ ನೀಡುವ ಮೂಲಕ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಜನವರಿಯಲ್ಲಿ ಆಗಿದ್ದ ಕದನವಿರಾಮ ಒಪ್ಪಂದಕ್ಕೆ ಹಿನ್ನಡೆ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಮೊದಲ ಹಂತದ ಕದನವಿರಾಮದ ಒಪ್ಪಂದಂತೆ ಒತ್ತೆಯಾಳುಗಳು ಕೈದಿಗಳ ಬಿಡುಗಡೆ ಬಳಿಕ 2ನೇ ಹಂತದ ಕದನದ ವಿರಾಮದ ಮಾತುಕತೆ ನಡೆಯಬೇಕು ಎಂದು ಹೇಳಿದೆ.
ಒತ್ತೆಯಾಳುಗಳ ಬಿಡುಗಡೆಗೆ ಇರುವ ಉತ್ತಮ ಮಾರ್ಗವೆಂದರೆ ಅದು ಮಾತುಕತೆ ಮಾತ್ರ. ಈಗ ಸೀಮಿತವಾಗಿ ಚರ್ಚೆ ಆಗಿದೆ ಎಂದು ಹಮಾಸ್ ವಕ್ತಾರ ಅಬ್ದೆಲ್ ಲತೀಫ್ ಅಲ್ ಅನೊವಾ ಹೇಳಿದ್ದಾರೆ.