ಐಜ್ವಾಲ್: 'ವಂದೇ ಮಾತರಂ' ಗೀತೆಯನ್ನು ಸುಮಧುರಾಗಿ ಹಾಡಿದ ಮಿಜೋರಾಂನ 7 ವರ್ಷದ ಬಾಲಕಿ ಎಸ್ತರ್ ಲಾಲ್ದುಹಾಮಿ ಹ್ನಾಮತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಿಟಾರ್ ಉಡುಗೊರೆಯಾಗಿ ನೀಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಭಾರತದ ಮೇಲಿನ ಪ್ರೀತಿ ನಮ್ಮೆಲ್ಲರನ್ನೂ ಒಂದುಗೂಡಿಸುತ್ತದೆ.
ಐಜ್ವಾಲ್‌ನಲ್ಲಿ 'ಮಿಜೋರಾಂ ವಂಡರ್ ಕಿಡ್' ಖ್ಯಾತಿಯ ಬಾಲಕಿ ಎಸ್ತರ್ ಲಾಲ್ದುಹಾವ್ಮಿ ಹ್ನಾಮತೆ ಧ್ವನಿಯಲ್ಲಿ 'ವಂದೇ ಮಾತರಂ' ಹಾಡು ಕೇಳಿ ತುಂಬಾ ಭಾವುಕನಾದೆ. ದೇಶದ ಬಗ್ಗೆ ಅವಳಿಗಿರುವ ಪ್ರೀತಿ ಅವಳ ಹಾಡಿನಲ್ಲಿ ವ್ಯಕ್ತವಾಗಿದೆ. ಅದನ್ನು ಕೇಳಿ ಸಂತೋಷಪಟ್ಟೆವು' ಎಂದು ಹೇಳಿದ್ದಾರೆ.
2020ರಲ್ಲಿ 'ಮಾ ತುಜೆ ಸಲಾಮ್' ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದ್ದ ಬಾಲಕಿ ಎಸ್ತರ್ ಕಂಠ ಮತ್ತು ದೇಶಭಕ್ತಿಗೆ ಇಡೀ ದೇಶವೇ ತಲೆಬಾಗಿತ್ತು. ರಾಜ್ಯಪಾಲರು ಸೇರಿದಂತೆ ಅನೇಕ ಗಣ್ಯರು ಎಸ್ತರ್ ಕಂಠ ಸಿರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಾಲಕಿಯ ಸಾಧನೆಗೆ ಸರ್ಕಾರವು ಪ್ರಶಸ್ತಿ ನೀಡಿ ಗೌರವಿಸಿತ್ತು.
ಮಾರ್ಚ್ 14ರಿಂದ ಮೂರು ದಿನಗಳ ಅಸ್ಸಾಂ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಅವರು ಶನಿವಾರ ಮೀಜೊರಾಂಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಅಸ್ಸಾಂ ರೈಫಲ್ಸ್ ಮತ್ತು ಮಿಜೋರಾಂ ಸರ್ಕಾರದ ನಡುವೆ ಭೂ ವರ್ಗಾವಣೆ ಸಮಾರಂಭದಲ್ಲಿ ಭಾಗವಹಿಸಿದ್ದರು.