ಫೋರ್ಟ್ ಲಾಡೆರ್ಡೇಲ್: ರಷ್ಯಾ ಜೊತೆಗಿನ ಅಮೆರಿಕದ ರಾಜತಾಂತ್ರಿಕ ಬಾಂಧವ್ಯ ಕುರಿತು ಉಕ್ರೇನ್ ಅಧ್ಯಕ್ಷರು ಎತ್ತಿದ್ದ ಪ್ರಶ್ನೆ ಅಮೆರಿಕ, ಉಕ್ರೇನ್ ಅಧ್ಯಕ್ಷರ ನಡುವೆ ಬಿಸಿ ಚರ್ಚೆಗೆ ಕಾರಣವಾಗಿದೆ.
'ರಷ್ಯಾ ಅದ್ಯಕ್ಷ ವ್ಲಾಡಿಮಿರ್ ಪುಟಿನ್ ಭಯೋತ್ಪಾದಕ' ಎಂದು ವಾಗ್ದಾಳಿ ನಡೆಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, 'ಜಗತ್ತು ಅವರ ಜತೆ ರಾಜಿಯಾಗಬಾರದು' ಎಂದು ಪ್ರತಿಪಾದಿಸಿದರು.
ಒಮ್ಮೆ ಝೆಲೆನ್‌ಸ್ಕಿ ಅವರತ್ತ ಬೆರಳು ತೋರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ನೀವು ರಿಯಾಯಿತಿ ಕೋರುವ ಸ್ಥಿತಿಯಲ್ಲಿ ಈಗ ಇಲ್ಲ. ಅಮೆರಿಕಕ್ಕೆ ನೀವು ಅಗೌರವ ತೋರುತ್ತಿದ್ದೀರಿ' ಎಂದು ಕಿಡಿಕಾರಿದರು.
ಝೆಲೆನ್‌ಸ್ಕಿ ಮತ್ತು ಅಮೆರಿಕ ಅಧ್ಯಕ್ಷ, ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನಡುವಿನ ಚರ್ಚೆಯ ಚಿತ್ರಣ ಇಲ್ಲಿದೆ.
ಜೆ.ಡಿ ವ್ಯಾನ್ಸ್: ಹಿಂದೆಯೂ ವ್ಲಾಡಿಮಿರ್ ಪುಟಿನ್ ಕುರಿತು ಕಟುವಾಗಿ ಮಾತನಾಡಿದ್ದೇವೆ. ಟ್ರಂಪ್ ಉತ್ತಮ ರಾಜತಾಂತ್ರಿಕತೆ ಮಾಡುತ್ತಿದ್ದಾರೆ.
ಝೆಲೆನ್‌ಸ್ಕಿ: ನಿಮಗೊಂದು ಪ್ರಶ್ನೆ ಕೇಳಲೇ? ಅವರು (ಪುಟಿನ್) ಉಕ್ರೇನ್‌ನ ದೊಡ್ಡ ಪ್ರದೇಶವನ್ನು 2014ರಲ್ಲಿ ಅತಿಕ್ರಮಿಸಿದರು. ಇಷ್ಟು ವರ್ಷ ನಾನು ಬೈಡನ್ ಕುರಿತಷ್ಟೇ ಮಾತನಾಡಲಿಲ್ಲ. ಹಿಂದೆ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ, ಟ್ರಂಪ್, ಬೈಡನ್, ಈಗ ಮತ್ತೆ ಟ್ರಂಪ್ ಬಗ್ಗೆ ಮಾತನಾಡುತ್ತಿದ್ದೇನೆ. ಟ್ರಂಪ್ ಈಗಲಾದರೂ ಅವರಿಗೆ (ಪುಟಿನ್) ತಡೆ ಒಡ್ಡುವರೇ? 2014ರಲ್ಲಿ ಯಾರೂ ಅವರನ್ನು ತಡೆಯಲಿಲ್ಲ.
ಟ್ರಂಪ್: '2015?'
ಝೆಲೆನ್‌ಸ್ಕಿ: '2014'
ಟ್ರಂಪ್: 'ಓಹ್, 2014? ಆಗ ನಾನಿರಲಿಲ್ಲ ಬಿಡಿ'
ವ್ಯಾನ್ಸ್: ಅದು ಸರಿಯಾದ ಮಾತು.
ಝೆಲೆನ್‌ಸ್ಕಿ: ನಿಜ. 2014ರಲ್ಲಿ ಮತ್ತು 2022ರವರೆಗೂ ಪರಿಸ್ಥಿತಿ ಹಾಗೇ ಇದೆ. ಜನರು ಸಾಯುತ್ತಿದ್ದಾರೆ. ನಾವು ನಿಮ್ಮಂತೆಯೇ ನಾನೂ ಅಧ್ಯಕ್ಷ. 2019ರಲ್ಲಿ ಒಪ್ಪಂದಕ್ಕೆ ಬಂದಿದ್ದೆವು. ಫ್ರೆಂಚ್ ಅಧ್ಯಕ್ಷ ಎಮಾನ್ಯುಯೆಲ್ ಮಾರ್ಕನ್, ಜರ್ಮನ್‌ನ ಚಾನ್ಸೆಲರ್ ಅಂಜೆಲಾ ಮಾರ್ಕೆಲ್ ಜೊತೆ್ಗೂ ಒಪ್ಪಂದ ಆಗಿತ್ತು. ಕದನವಿರಾಮ ಒಪ್ಪಂದ ಆಗಿತ್ತು. ಅತಿಕ್ರಮಣ ಆಗುವುದಿಲ್ಲ ಎಂದೇ ಎಲ್ಲ ಹೇಳಿದ್ದರು. ನಂತರ ಕದನವಿರಾಮ ಉಲ್ಲಂಘಿಸಲಾಯಿತು. ಅವರು ಜನರನ್ನು ಕೊಂದರು. ಕೈದಿಗಳ ವಿನಿಮಯ ಆಗಲಿಲ್ಲ. ಇದು, ಯಾವ ರೀತಿಯ ರಾಜತಾಂತ್ರಿಕತೆ. ವ್ಯಾನ್ಸ್, ನೀವು ಮಾತನಾಡುತ್ತಿರುವ ರಾಜತಾಂತ್ರಿಕತೆಯ ಅರ್ಥ ಏನು?
ವ್ಯಾನ್ಸ್: ಅಧ್ಯಕ್ಷರೆ, ನೀವು ಅಮೆರಿಕದ ಮಾಧ್ಯಮದ ಎದುರು ಅಮೆರಿಕಕ್ಕೆ ಅಗೌರವ ತೋರುತ್ತಿದ್ದೀರಿ. ತಿಕ್ಕಾಟ ಅಂತ್ಯಗೊಳಿಸುವ ಯತ್ನಕ್ಕಾಗಿ ಟ್ರಂಪ್ ಅವರಿಗೆ ನೀವು ಕೃತಜ್ಞತೆ ಸಲ್ಲಿಸಬೇಕು.
ಝೆಲೆನ್‌ಸ್ಕಿ: ನಾವು ಎಂತಹ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಗೊತ್ತಾ? ಉಕ್ರೇನ್‌ಗೆ ಒಮ್ಮೆ ಭೇಟಿ ನೀಡಿ.
ವ್ಯಾನ್ಸ್: ನಾವು ಗಮನಿಸಿದ್ದೇನೆ. ಓದಿದ್ದೇನೆ. ಅಲ್ಲಿ ಏನಾಗುತ್ತಿದೆ ಎಂದು ಗೊತ್ತಿದೆ.
ಝೆಲೆನ್‌ಸ್ಕಿ: ಯುದ್ಧದ ಅವಧಿಯಲ್ಲಿ ಎಲ್ಲರಿಗೂ ಸಮಸ್ಯೆಗಳಿರುತ್ತವೆ. ನಿಮಗೂ ಕೂಡಾ. ಆದರೆ, ನಿಮಗೆ ಹತ್ತಿರದಲ್ಲಿ ಸಮುದ್ರವಿದೆ. ಈಗ ಅರ್ಥವಾಗುವುದಿಲ್ಲ. ಮುಂದೆ ಗೊತ್ತಾಗುತ್ತದೆ.
ಟ್ರಂಪ್: ನಾವು ಏನು ಅನುಭವಿಸುತ್ತೇವೆ ಎಂದು ನೀವು ಹೇಳುವ ಅಗತ್ಯವಿಲ್ಲ
ಝೆಲೆನ್‌ಸ್ಕಿ: ನಾನು ನಿಮಗೆ ಹೇಳುತ್ತಿಲ್ಲ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೇನೆ.
ಟ್ರಂಪ್: ನೀವು ಈಗ ನಮಗೆ ಹೇಳುವ ಸ್ಥಿತಿಯಲ್ಲಿ ಇಲ್ಲ.
ವ್ಯಾನ್ಸ್: ಆದರೆ, ನೀವು ಅದನ್ನೇ ಮಾಡುತ್ತಿದ್ದೀರಿ (ಝೆಲೆನ್‌ಸ್ಕಿ ಉದ್ದೇಶಿಸಿ)
ಟ್ರಂಪ್: ಝೆಲೆನ್‌ಸ್ಕಿ. ಈಗ ನಿಮ್ಮ ಸ್ಥಿತಿ ಸರಿಯಾಗಿಲ್ಲ. ಕಷ್ಟದ ಸ್ಥಿತಿ ತಂದುಕೊಂಡಿದ್ದೀರಿ.
ಝೆಲೆನ್‌ಸ್ಕಿ: ಯುದ್ಧ ಆರಂಭವಾದ ದಿನದಿಂದಲೇ....
ಟ್ರಂಪ್: ನೀವು ಹೇಳುವ ಸ್ಥಿತಿಯಲ್ಲಿ ಇಲ್ಲ. ಆ ಅವಕಾಶಗಳು ಇಲ್ಲ.
ಝೆಲೆನ್‌ಸ್ಕಿ: ಅವಕಾಶದ ಪ್ರಶ್ನೆಯಲ್ಲ. ಗಂಭೀರವಾಗಿ ಹೇ'ಳುತ್ತಿದ್ದೇನೆ.
ಟ್ರಂಪ್: 3ನೇ ವಿಶ್ವಯುದ್ಧಕ್ಕೆ ಆಸ್ಪದವಾಗುವಂತೆ ಲಕ್ಷಾಂತರ ಜನರ ಜೀವನದ ಜೊತೆ ಆಟವಾಡುತ್ತಿದ್ದೀರಿ?
ಝೆಲೆನ್‌ಸ್ಕಿ: ಏನು ಮಾತನಾಡುತ್ತಿದ್ದೀರಿ ನೀವು ಯುದ್ಧದ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡುವಿರಾ? ನೀವು ಮಾತನಾಡಬಹುದು.
ಟ್ರಂಪ್: ನಿಮ್ಮ ರಾಷ್ಟ್ರ ಅಪಾಯದಲ್ಲಿದೆ.
ಝೆಲೆನ್‌ಸ್ಕಿ: ನನಗೆ ಗೊತ್ತಿದೆ, ಗೊತ್ತಿದೆ....
ಟ್ರಂಪ್: ನಿಮ್ಮಲ್ಲಿ ಅಮೆರಿಕದ ಸೇನಾ ಪರಿಕರಗಳು ಇಲ್ಲದಿದ್ದರೆ, ಕೆಲವೇ ವಾರದಲ್ಲಿ ಯುದ್ಧ ಮುಗಿಯುತ್ತಿತ್ತು.
ಝೆಲೆನ್‌ಸ್ಕಿ: ಮೂರು ದಿನಗಳಲ್ಲಿ.... ಪುಟಿನ್ ಹಾಗೇ ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ.
ಟ್ರಂಪ್: ಬಹುಶಃ ಅದಕ್ಕೂ ಕಡಿಮೆ ಅವಧಿ.
ವ್ಯಾನ್ಸ್: ಸುಮ್ಮನೆ ನೀವು ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿ.
ಝೆಲೆನ್‌ಸ್ಕಿ: ನಾನು ಅನೇಕ ಬಾರಿ ಹೇಳಿದ್ದೇನೆ. ಅಮೆರಿಕದ ಜನರಿಗೆ ಕೃತಜ್ಞತೆಗಳು.
ಟ್ರಂಪ್: ನಿಮಗೆ ಹೆಚ್ಚು ಆಯ್ಕೆಗಳಿಲ್ಲ. ನಿಮ್ಮ ಜನರು ಸಾಯುತ್ತಿದ್ದಾರೆ. ಕದನವಿರಾಮ ಒಪ್ಪಿಕೊಂಡರೆ. ಮತ್ತಷ್ಟು ಗುಂಡುಗಳು ತೂರಿಬಂದು ನಿಮ್ಮವರು ಸಾಯುವುದು ತಪ್ಪಲಿದೆ.
ಝೆಲೆನ್‌ಸ್ಕಿ: ಖಂಡಿತವಾಗಿ ನಾವು ಯುದ್ಧ ನಿಲ್ಲಿಸಲು ಬಯಸುತ್ತೇವೆ. ಅದಕ್ಕೆ ಖಚಿತವಾದ ಭರವಸೆ ಬೇಕು.
ಟ್ರಂಪ್: ಒಪ್ಪಂದ ಆಗಿದ್ದಕ್ಕಿಂತಲೂ ವೇಗವಾಗಿ ಕದನವಿರಾಮದ ಅವಕಾಶ ನಿಮಗೆ ಸಿಗಲಿದೆ.
ಝೆಲೆನ್‌ಸ್ಕಿ: ಕದನವಿರಾಮ ಬಗ್ಗೆ ನಮ್ಮ ಜನರನ್ನು ಕೇಳುತ್ತೇನೆ?
ಟ್ರಂಪ್: ಹಿಂದಿನ ಚರ್ಚೆ ನನ್ನೊಂದಿಗಲ್ಲ. ಬೈಡನ್ ಹೆಸರಿನವರ ಜೊತೆಗೆ ಆಗಿದ್ದು. ಅವರು ಬುದ್ಧಿವಂತರಲ್ಲ.
ಝೆಲೆನ್‌ಸ್ಕಿ: ಆದರೆ, ಅವರು ನಿಮ್ಮ ಅಧ್ಯಕ್ಷರು.
ಟ್ರಂಪ್: ಕ್ಷಮಿಸಿ. ಅದು ಒಬಾಮಾ ಜೊತೆಗೆ ಆಗಿದ್ದ ಚರ್ಚೆ. ಆಗ ಅವರು ನಿಮಗೆ ಭರವಸೆ ನೀಡಿದ್ದರು. ನಾನು ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದೆ. ನೀವು ನನಗೇ ಕೃತಜ್ಞರಾಗಿರಬೇಕು. ಪುಟಿನ್ ಕೂಡಾ ನನಗೆ ಗೌರವ ನೀಡುತ್ತಾರೆ.
ಸರಿ. ನಾವು ಸಾಕಷ್ಟು ನೋಡಿದ್ದೇವೆ. ಈಗ ನಿಮಗೆ ಏನು ಅನಿಸುತ್ತದೆ. ಇದು, ಟಿ.ವಿಯಲ್ಲಿ ದೊಡ್ಡ ಚರ್ಚೆ ಆಗಲಿದೆ. ಅಷ್ಟನ್ನು ನಾನು ಹೇಳಬಯಸುತ್ತೇನೆ...
ವೊಲೊಡಿಮಿರ್ ಝೆಲೆನ್‌ಸ್ಕಿ ಉಕ್ರೇನ್ ಅಧ್ಯಕ್ಷನಮಗೆ ಶಾಂತಿ ಬೇಕಾಗಿದೆ. ಅದಕ್ಕಾಗಿಯೇ ನಾನು ಅಮೆರಿಕಕ್ಕೆ ತೆರಳಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾಗಿದೆ. ಖನಿಜ ಸಂಪನ್ಮೂಲ ಕುರಿತ ಒಪ್ಪಂದ ಶಾಂತಿ ಸ್ಥಾಪನೆಯ ಹಾದಿಯಲ್ಲಿ ಮೊದಲ ಹೆಜ್ಜೆಯಷ್ಟೇ.
ಹೊಡೆಯದೇ ಟ್ರಂಪ್ ತಾಳ್ಮೆ ವಹಿಸಿದ್ದು ಹೇಗೆ?
-ರಷ್ಯಾ ಮಾಸ್ಕೊ (ಪಿಟಿಐ): 'ಆಶ್ಚರ್ಯ.. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರಿಗೆ ಹೊಡೆಯದೇ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಹೇಗೆ ಸಂಯಮವನ್ನು ಕಾಯ್ದುಕೊಂಡರು..?' ಎಂದು ರಷ್ಯಾ ಪ್ರಶ್ನಿಸಿದೆ.
ಅಮೆರಿಕದ ಓವಲ್ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಟ್ರಂಪ್ ಅವರು ಝೆಲೆನ್‌ಸ್ಕಿ ಅವರ ಮೇಲೆ ಕೂಗಾಡಿದ್ದರು. 3ನೇ ವಿಶ್ವಯುದ್ಧಕ್ಕೆ ಆಸ್ಪದವಾಗುವಂತೆ ಲಕ್ಷಾಂತರ ಜನರ ಜೀವನದ ಜೊತೆ ಆಟವಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದರು. ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಝಕಾರೊವಾ '2022ರಲ್ಲಿ ಉಕ್ರೇನ್ ಏಕಾಂಗಿಯಾಗಿತ್ತು' ಎಂಬುದು ಝೆಲೆನ್‌ಸ್ಕಿ ಅವರ ದೊಡ್ಡ ಸುಳ್ಳು' ಎಂದಿದ್ದಾರೆ.
ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್‌ವೆಡೆವ್ 'ಝೆಲೆನ್‌ಸ್ಕಿ ಅವರು ಅಹಂಕಾರವುಳ್ಳ ಹಂದಿ. ಒವಲ್ ಕಚೇರಿಯಲ್ಲಿ ಸರಿಯಾಗಿಯೇ ಸರಿಯಾದ ಪೆಟ್ಟು ಬಿದ್ದಿದೆ' ಎಂದಿದ್ದಾರೆ.