ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ದೇಶಿಯವಾಗಿ ತಯಾರಿಸಲಾದ ಎಂಆರ್‌ಐ ಸ್ಕ್ಯಾನರ್ ಲೋಕಾರ್ಪಣೆಗೊಳ್ಳಲು ಸಿದ್ದವಾಗಿದೆ.
ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿ ಸ್ವಾಯತ್ತವಾಗಿ ಕಾರ್ಯನಿರ್ವಹಿಸುವ ಮುಂಬೈನ 'ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮತ್ತು ರಿಸರ್ಚ್ ಸೆಂಟರ್' (SAMEER) ದೆಹಲಿಯ ಏಮ್ಸ್ ಆಸ್ಪತ್ರೆಯ ಸಹಭಾಗಿತ್ವದೊಂದಿಗೆ 1.5 Tesla ಎಂಆರ್‌ಐ ಸ್ಕ್ಯಾನರ್ ಅನ್ನು ಅಭಿವೃದ್ಧಿಪಡಿಸಿದೆ.
SAMEER ಅಭಿವೃದ್ಧಿಪಡಿಸಿರುವ ಹೊಸ ಎಂಆರ್‌ಐ ಸ್ಕ್ಯಾನರ್ ಅನ್ನು ಏಮ್ಸ್‌ನಲ್ಲಿ ಅಳವಡಿಸಲಾಗಿದ್ದು ಈ ವರ್ಷದ ಅಕ್ಟೋಬರ್‌ನಲ್ಲಿ ಅದರ ಕ್ಲಿನಿಕಲ್ ಟ್ರಯಲ್ ಮತ್ತು ಮೌಲ್ಯಮಾಪನ ನಡೆಯಲಿದೆ.
ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಸ್ಕ್ಯಾನರ್‌ನಿಂದ ಎಂಆರ್‌ಐ ತಪಾಸಣೆಗಳ ವೆಚ್ಚ ಗಣನೀಯವಾಗಿ ತಗ್ಗಲಿದ್ದು, ವಿದೇಶಗಳ ಮೇಲಿನ ಅವಲಂಬನೆಯೂ ತಗ್ಗಲಿದೆ ಎಂದು ಏಮ್ಸ್ ನಿರ್ದೇಶಕ ಡಾ. ಎಂ. ಶ್ರೀನಿವಾಸ್ ಹೇಳಿದ್ದಾರೆ.
ಸದ್ಯ ಭಾರತದಲ್ಲಿ ಎಂಆರ್‌ಐ ಸೇರಿದಂತೆ ಐಸಿಯು ಉಪಕರಣಗಳು ಹಾಗೂ ರೊಬಾಟಿಕ್ ವೈದ್ಯಕೀಯ ಉಪಕರಣಗಳನ್ನು ವಿದೇಶಗಳಿಂದಲೇ ತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದೇಶಿಯವಾಗಿ ಎಂಆರ್‌ಐ ಸ್ಕ್ಯಾನರ್ ಅಭಿವೃದ್ಧಿಪಡಿಸಿರುವುದು ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯ ಸಾಕಾರಕ್ಕೆ ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ.
'ಸದ್ಯ ಭಾರತದಲ್ಲಿ ಎಂಆರ್‌ಐನಂಥಹ ಉನ್ನತ ವೈದ್ಯಕೀಯ ಉಪಕರಣಗಳ ಮೌಲ್ಯಮಾಪನಕ್ಕೆ ಯಾವುದೇ ಸಕ್ಷಮ ಪ್ರಾಧಿಕಾರ ಇಲ್ಲ. ಏಮ್ಸ್‌ನಲ್ಲಿ ನಾವು ಅಭಿವೃದ್ಧಿಪಡಿಸಿದ ಸ್ಕ್ಯಾನರ್ ಅನ್ನು ಕ್ಲಿನಿಕಲ್ ಟ್ರಯಲ್‌ಗೆ ಒಳಪಡಿಸಲಾಗುತ್ತದೆ. ಇದು ಸಂಪೂರ್ಣ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ನಮಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯವು ದೇಶಿಯವಾಗಿ ಅಭಿವೃದ್ಧಿಪಡಿಸಿದ ಎಂಆರ್‌ಐ ಹಾಗೂ ಇತರ ಉನ್ನತ ವೈದ್ಯಕೀಯ ಉಪಕರಣಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿ ಅನುಮತಿ ನೀಡುವ ಸೂಚನೆ ಸಿಕ್ಕಿದೆ' ಎಂದು SAMEER ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಚ್. ರಾವ್ ತಿಳಿಸಿದ್ದಾರೆ.
ದೇಶಿಯ ಯಂತ್ರದಿಂದ ಎಂಆರ್‌ಐ ಸ್ಕ್ಯಾನರ್ ತಪಾಸಣೆ ವೆಚ್ಚಗಳು ಇನ್ಮುಂದೆ ಶೇ 50 ರಷ್ಟು ತಗ್ಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.