ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತವನ್ನು ಉರುಳಿಸಿದ ವಿದ್ಯಾರ್ಥಿಗಳ ವೇದಿಕೆ ಶುಕ್ರವಾರ ನೂತನ ರಾಜಕೀಯ ಪಕ್ಷವನ್ನು ರಚಿಸಿದೆ. 'ದೇಶದಲ್ಲಿ ಈಗ ಭಾರತ ಪರ ಮತ್ತು ಪಾಕಿಸ್ತಾನ ಪರ ರಾಜಕಾರಣಕ್ಕೆ ಅವಕಾಶವಿರುವುದಿಲ್ಲ' ಎಂದು ಅದು ಘೋಷಿಸಿದೆ.
ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿ ಅಥವಾ ತಾರತಮ್ಯದ ವಿರುದ್ಧದ ವಿದ್ಯಾರ್ಥಿಗಳ (ಎಸ್‌ಎಡಿ) ಗುಂಪು ಈಗ 'ಜಾತೀಯ ನಾಗೋರಿಕ್ ಪಕ್ಷ' ಅಥವಾ ರಾಷ್ಟ್ರೀಯ ನಾಗರಿಕ ಪಕ್ಷ (ಎನ್‌ಸಿಪಿ)ವಾಗಿ ಮಾರ್ಪಟ್ಟಿದೆ.
ಕೇಂದ್ರ ಢಾಕಾದ ಮಾಣಿಕ್ ಮಿಯಾ ಅವೆನ್ಯೂದಲ್ಲಿ ಕಳೆದ ಜುಲೈ-ಆಗಸ್ಟ್‌ನಲ್ಲಿ ಹಸೀನಾ ಆಡಳಿತದ ವಿರುದ್ಧ ನಡೆದ ದಂಗೆಯ ನೇತೃತ್ವದ ವಹಿಸಿದ್ದ ಪ್ರಮುಖ ನಾಯಕರಲ್ಲಿ ಒಬ್ಬರಾದ ನಹಿದ್ ಇಸ್ಲಾಂ ಅವರನ್ನು ನೂತನ ಪಕ್ಷದ ಸಂಚಾಲಕರನ್ನಾಗಿ ನೇಮಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಾಯಕರು ನೂತನ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಕೆಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವ್ಯಾಟಿಕನ್ ಮತ್ತು ಪಾಕಿಸ್ತಾನದ ರಾಯಭಾರಿಗಳು ಭಾಗವಹಿಸಿದ್ದರು.