ನವದೆಹಲಿ: ಮಣಿಪುರದ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ದೀರ್ಘಾವಧಿಯ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಶುಕ್ರವಾರ ಹೇಳಿದ್ದಾರೆ.
'ಇಂಡಿಯಾ ಟುಡೆ ಕಾನ್‌ಕ್ಲೇವ್'ನಲ್ಲಿ ಮಾತನಾಡಿದ ಅವರು, ಮಣಿಪುರದಲ್ಲಿ ಶಾಂತಿ ಮತ್ತೆ ನೆಲಸುತ್ತದೆ ಎಂಬ ಭರವಸೆ ತಮಗೆ ಇದೆ ಎಂದರು.
ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿರುವುದನ್ನು ಅವರು ತಳ್ಳಿಹಾಕಿದರು.
'ಸಮಸ್ಯೆ ಇರುವ ಸ್ಥಳಕ್ಕೆ ಪ್ರಧಾನಿ ಭೇಟಿ ನೀಡಬೇಕು ಎಂದರೆ ಏನು? ಪ್ರಧಾನಿಗೆ ಸಮಸ್ಯೆ ಏನು ಎಂಬುದು ಗೊತ್ತಿರಬೇಕು. ಅದು ಹೆಚ್ಚು ಮುಖ್ಯ. ಭೇಟಿ ನೀಡುವುದು, ಹೇಳಿಕೆ ಕೊಡುವುದು ಇನ್ನೊಂದು ವಿಚಾರ. ಮಣಿಪುರದ ಜನ ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಎಂದು ಸಮಸ್ಯೆಯ ಮೂಲಕ್ಕೆ ಇಳಿದಿರುವ ಪ್ರಧಾನಿ ಇವರೊಬ್ಬರೇ' ಎಂದು ರಿಜಿಜು ಹೇಳಿದರು.
ಹಿಂದೆ ಮಣಿಪುರದಲ್ಲಿ ಸಾವಿರಾರು ಮಂದಿಯ ಹತ್ಯೆ ಆದಾಗ ಜಂಟಿ ಕಾರ್ಯದರ್ಶಿ ದರ್ಜೆಯ ಅಧಿಕಾರಿ ಮಾತ್ರ ದಿನದ ಮಟ್ಟಿಗೆ ಮಣಿಪುರಕ್ಕೆ ಭೇಟಿ ನೀಡುತ್ತಿದ್ದರು ಎಂದರು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದಲ್ಲಿ ನಾಲ್ಕು ದಿನ ಇದ್ದರು, ಶಾಂತಿಗಾಗಿ ಮನವಿ ಮಾಡಿದರು ಎಂದು ನೆನಪಿಸಿದರು.
ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರ, ಶಸ್ತ್ರಗಳನ್ನು ತ್ಯಜಿಸುವಂತೆ ರಾಜ್ಯಪಾಲರು ಮನವಿ ಮಾಡಿದ್ದಾರೆ. ಶಸ್ತ್ರಗಳನ್ನು ತಂದೊಪ್ಪಿಸಲಾಗುತ್ತಿದೆ... ಒಳ್ಳೆಯ ಸುದ್ದಿ ಬರುತ್ತಿದೆ ಎಂದು ಕೂಡ ರಿಜಿಜು ಹೇಳಿದರು.