ನವದೆಹಲಿ: ದೇಶದಲ್ಲಿ ಸಾಲ ಪಡೆದ ಮಹಿಳೆಯರ ಪ್ರಮಾಣವು ಕಳೆದ ಐದು ವರ್ಷಗಳ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಳ ಕಂಡಿದೆ. ಈ ಅವಧಿಯಲ್ಲಿ ಸಾಲ ಪಡೆದ ಮಹಿಳೆಯರ ಪ್ರಮಾಣವು ವಾರ್ಷಿಕ ಸಂಯುಕ್ತ ಶೇಕಡ 22ರಷ್ಟು (ಸಿಎಜಿಆರ್) ದರದಲ್ಲಿ ಬೆಳೆದಿದೆ.
ಹೀಗೆ ಸಾಲ ಪಡೆದವರಲ್ಲಿ ಗ್ರಾಮೀಣ ಪ್ರದೇಶದವರು ಹಾಗೂ ಅರೆ-ನಗರ ಪ್ರದೇಶಗಳಿಗೆ ಸೇರಿದವರು ಹೆಚ್ಚಿದ್ದಾರೆ.
ಇವರು ತಮ್ಮ ಕ್ರೆಡಿಟ್ ಅಂಕಗಳನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರುತ್ತಾರೆ. ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ಸೋಮವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಈ ವಿವರಗಳು ಇವೆ.
ಮಹಿಳೆಯರು ವಿವಿಧ ಖರೀದಿಗಳಿಗಾಗಿ ಸಾಲ ಪಡೆದಿರುವುದು ಹೆಚ್ಚಿದೆ, ವಾಣಿಜ್ಯೋದ್ಯಮದ ಉದ್ದೇಶಕ್ಕೆ ಸಾಲ ಪಡೆದಿರುವುದು ಕಡಿಮೆ ಇದೆ. ಟ್ರಾನ್ಸ್‌ಯೂನಿಯನ್ ಸಿಬಿಲ್, ನೀತಿ ಆಯೋಗದ ಮಹಿಳಾ ಉದ್ಯಮಿಗಳ ವೇದಿಕೆ (ಡಬ್ಲ್ಯುಇಪಿ) ಮತ್ತು ಮೈಕ್ರೊಸೇವ್ ಕನ್ಸಲ್ಟಿಂಗ್ (ಎಂಎಸ್‌ಸಿ) ಈ ವರದಿಯನ್ನು ಸಿದ್ಧಪಡಿಸಿವೆ.
2024ರಲ್ಲಿ ಮಹಿಳೆಯರು ಪಡೆದ ಒಟ್ಟು ಸಾಲದಲ್ಲಿ ವಾಣಿಜ್ಯೋದ್ಯಮ ಉದ್ದೇಶಕ್ಕೆ ಪಡೆದಿದ್ದರ ಪ್ರಮಾಣ ಶೇ 3ರಷ್ಟು ಮಾತ್ರವೇ ಇದೆ. ವೈಯಕ್ತಿಕ ಸಾಲ, ಗೃಹಬಳಕೆ ವಸ್ತುಗಳಿಗಾಗಿ ಸಾಲ, ಮನೆ ಖರೀದಿಗೆ ಪಡೆದ ಸಾಲದ ಒಟ್ಟು ಪ್ರಮಾಣ ಶೇ 42ರಷ್ಟಿದೆ.