ಡೆಹ್ರಾಡೂನ್: ಉತ್ತರಾಖಂಡದ ಪರ್ವತ ಪ್ರದೇಶಗಳ ಕುರಿತು ತಾವು ನೀಡಿದ್ದ ಹೇಳಿಕೆ ವಿವಾದ ಸ್ವರೂಪ ಪಡೆದು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಹಣಕಾಸು ಸಚಿವ ಪ್ರೇಮಚಂದ್ ಅಗರವಾಲ್ ತಮ್ಮ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಅವರ ಗೃಹ ಕಚೇರಿಗೆ ತೆರಳಿ, ಅಗರವಾಲ್ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಫೆಬ್ರುವರಿಯಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಮಾತನಾಡುವ ವೇಳೆ, ಕಾಂಗ್ರೆಸ್ ಶಾಸಕ ಮದನ್ ಬಿಷ್ಟ್ ಅವರು ಸಚಿವ ಅಗರವಾಲ್ ವಿರುದ್ಧ ಟೀಕೆ ಮಾಡಿದ್ದರು.
ಬಿಷ್ಟ್ ಮಾತಿಗೆ ಆಕ್ರೋಶಗೊಂಡು ಪ್ರತಿಕ್ರಿಯೆ ನೀಡಿದ್ದ ಅಗರವಾಲ್, 'ಪರ್ವತ ಪ್ರದೇಶಗಳ ಜನರಿಗಾಗಿ ಉತ್ತರಾಖಂಡ ರಾಜ್ಯ ರಚಿಸಲಾಗಿದೆಯೇ? ಮುಂದೊಂದು ದಿನ ಪರ್ವತ ಪ್ರದೇಶ ಹಾಗೂ ಬಯಲು ಸೀಮೆ ಎಂಬುದಾಗಿ ಈ ರಾಜ್ಯ ಇಬ್ಭಾಗವಾಗುವುದನ್ನು ನೋಡುವುದಕ್ಕಾಗಿ ನಾನು ಹೋರಾಟ ನಡೆಸಿಲ್ಲ' ಎಂದಿದ್ದರು.
ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ, ರಾಜ್ಯದ ಪರ್ವತ ಪ್ರದೇಶಗಳ ಜನರು ಅಗರವಾಲ್ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ನಂತರ, ಅಗರವಾಲ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ಪಕ್ಷದ ರಾಜ್ಯ ಘಟಕ ಕೂಡ ಅಗರವಾಲ್ ಅವರಿಗೆ ಎಚ್ಚರಿಕೆ ನೀಡಿತ್ತಲ್ಲದೇ, ಸಂಯಮ ಕಾಯ್ದುಕೊಳ್ಳುವಂತೆ ಸೂಚಿಸಿತ್ತು.