ಬದಿಯಡ್ಕ:ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಾಸರಗೋಡು ವತಿಯಿಂದ 89ನೇ ತ್ರಿಮೂರ್ತಿ ಶಿವಜಯಂತಿ ಹಾಗೂ ವಿಶ್ವ ಮಹಿಳಾ ದಿನಾಚರಣೆ ಮಾನ್ಯ ವರದಾನಿ ಭವನದಲ್ಲಿ ಮಾ.16 ರಂದು ನಡೆಯಿತು. ಶಿವ ಧ್ವಜಾರೋಹಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕಾಸರಗೋಡು ವನಿತಾ ಪೋಲೀಸ್ ಅಧಿಕಾರಿ ಬಿಂದು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಕೀರ್ತನಾ ಕಾಸರಗೋಡು ಮುಖ್ಯ ಅತಿಥಿಗಳಾಗಿದ್ದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಾಸರಗೋಡಿನ ಸಂಚಾಲಕಿ ರಾಜಯೋಗಿನಿ ಬಿ.ಕೆ.ವಿಜಯಲಕ್ಷ್ಮೀ ಅವರು ಈ ಸಂದರ್ಭ ಶಿವರಾತ್ರಿ ಸಂದೇಶ ನೀಡಿದರು. ಸಮಾಜದ ಪ್ರತಿಯೊಬ್ಬರಿಗೂ ಶಾಂತಿ, ನೆಮ್ಮದಿ, ಆರೋಗ್ಯ ಸಮೃದ್ಧಿಗೆ ರಾಜಯೋಗದಿಂದ ಸಾಧ್ಯವಾಗಲಿದೆ. ಪ್ರತಿಯೊಬ್ಬರೂ ಧ್ಯಾನಸ್ಥ ಸ್ಥಿತಿಗೆ ಒಡ್ಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಂದು ಅವರು ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆಗೆ ನ್ಯಾಯದೊರಕಿಸುವ ಅನಿವಾರ್ಯತೆ ಇದೆ ಎಂದರು. ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಸಹಿತ ಎಲ್ಲಾ ವಲಯಗಳಲ್ಲಿ ಉನ್ನತ ಸ್ಥಾನ ಗಳಿಸುವಲ್ಲಿ ಕಾರ್ಯೋನ್ಮುಖರಾಗುವ ಅಗತ್ಯದ ಬಗ್ಗೆ ವಕೀಲೆ ಕೀರ್ತನ ಕಾಸರಗೋಡು ಕರೆನೀಡಿದರು.
ರಾಜಯೋಗ ಶಿಕ್ಷಣದಿಂದ ಆರೋಗ್ಯ ನಿರ್ವಹಣೆಯಲ್ಲಿ ಗಮನಾರ್ಹ ಯಶಸ್ಸು ಸಾಧ್ಯವಿದೆ. ಔಷಧಿ ರಹಿತ ಜೀವನ ಸುಖಃ ನೆಮ್ಮದಿಯ ಲಕ್ಷ್ಯಪ್ರಾಪ್ತಿಗೆ ದಾರಿದೀಪವಾಗಿ ರಾಜಯೋಗ ಅರಿವು ಮಹತ್ವಿಕೆಯುಳ್ಳದ್ದು ಎಂದು ಅತಿಥಿಗಳಾಗಿದ್ದ ಜಯಂತಿ ತಿಳಿಸಿದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಜ್ಯೋತಿ, ಗೀತಾ, ಗ್ರಾ.ಪಂ.ಸದಸ್ಯೆ ಸ್ವಪ್ನ ಮಲ್ಲಡ್ಕ, ಜಯಂತಿ ಅವರನ್ನು ರಾಜಯೋಗಿನಿ ಬಿ.ಕೆ.ಮಂಗಳ ಗೌರವಿಸಿದರು. ರಾಜಯೋಗಿನಿ ಬಿ.ಕೆ. ಕವಿತ ಸ್ವಾಗತಿಸಿ, ಎಂ.ಎಚ್.ಜನಾರ್ದನ ವಂದಿಸಿದರು. ಬಿ.ಕೆ.ಬಿಂದು ಬ್ರಹ್ಮಕುಮಾರೀಸ್ ಸಂಘಟನೆಯ ಕಿರುಪರಿಚಯ ನೀಡಿದರು.