ಕಾಸರಗೋಡು: ನಮ್ಮ ಕಾಸರಗೋಡು ಯೋಜನೆ ಕುರಿತು ಜಿಲ್ಲೆಯ ಟ್ರಾವೆಲ್ ಆಂಡ್ ಟೂರಿಸಂ ಪ್ರಾಯೋಜಕರೊಂದಿಗೆ ಜಿಲ್ಲಾಧಿಕಾರಿ ನಿನ್ನೆ ಸಭೆ ನಡೆಸಿದರು. ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕರು ವಿಷಯ ಮಂಡಿಸಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾಸರಗೋಡು ಜಿಲ್ಲೆಯ ಮಾರುಕಟ್ಟೆ ಸಾಮಥ್ರ್ಯದ ಬಗ್ಗೆ ಚರ್ಚಿಸಲಾಯಿತು. ಆಲಪ್ಪುಳದಲ್ಲಿ ಕೇಂದ್ರೀಕೃತವಾಗಿರುವ ಹಿನ್ನೀರು ಪ್ರವಾಸೋದ್ಯಮವನ್ನು ಕಾಸರಗೋಡು ಜಿಲ್ಲೆಗೆ ವಿಸ್ತರಿಸಬೇಕು ಮತ್ತು ಜಿಲ್ಲೆಗೆ ಪ್ರವಾಸೋದ್ಯಮ ಕ್ಯಾಲೆಂಡರ್ ಇರಬೇಕು ಎಂಬ ಸಲಹೆ ಕೇಳಿಬಂತು.
ಕೇರಳದ ಏಕೈಕ ಸರೋವರ ದೇವಾಲಯ, ಅನಂತಪುರ ದೇವಾಲಯ ಮತ್ತು ಜೈನ ದೇವಾಲಯ ಚತುರ್ಮುಖ ಬಸ್ತಿ ಇರುವ ಬಂಗ್ರಮಂಜೇಶ್ವರದಲ್ಲಿ ತೀರ್ಥಯಾತ್ರೆ ಪ್ರವಾಸೋದ್ಯಮವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಸಭೆ ನಿರ್ಣಯಿಸಿತು. ಮಂಜೇಶ್ವರವನ್ನು ಜಿಲ್ಲೆಯ ಸ್ವಾಗತಾರ್ಹ ಸ್ಥಳವನ್ನಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕಣ್ವತೀರ್ಥ ಬೀಚ್, ಕಸಬಾ ಬೀಚ್, ಚೆಂಬರಿಕೆ ಬೀಚ್ ಮತ್ತು ಪೊಸಡಿಗುಂಬೆಯಂತಹ ಪ್ರದೇಶಗಳನ್ನು ಪ್ರವಾಸಿ ತಾಣಗಳಾಗಿ ಪರಿವರ್ತಿಸುವ ಕೆಲಸ ಪ್ರಗತಿಯಲ್ಲಿದೆ ಮತ್ತು ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಂಡ ನಂತರ ಸೂಚನಾ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾಸರಗೋಡು ಟ್ರಾವೆಲ್ ಆಂಡ್ ಟೂರಿಸಂ ಸಂಘದ ಅಧ್ಯಕ್ಷ ಮನಾಫ್ ನುಳ್ಳಿಪಾಡಿ, ಪ್ರಯಾಣ ಮತ್ತು ಪ್ರವಾಸೋದ್ಯಮ ಸಂಘದ ಪ್ರತಿನಿಧಿಗಳಾದ ಅಬ್ದುಲ್ ಖಾದರ್, ಕೆ ರಾಮದಾಸ್, ಪಿ ಸುಜಿತ್ ಕುಮಾರ್, ಬಿ ಎ ಅಬೂಬಕರ್, ಪಿ ಎಂ ಜಾಫರ್, ಟಿ ಯು ಮ್ಯಾಥ್ಯೂ, ಅಬ್ದುಲ್ಲಾ, ಅಬ್ದುಲ್ ರಹಿಮಾನ್, ನಜೀರುದ್ದೀನ್, ಸುವಿಲ್ ಸಿಲಾಸ್ ಮತ್ತಿತರರು ಭಾಗವಹಿಸಿದ್ದರು.