ಜಲಗಾಂವ್ : 'ಜಿಲ್ಲೆಯ ಕೋಥಲಿ ಗ್ರಾಮದಲ್ಲಿ ಸಂತ ಮುಕ್ತಾಯಿ ಯಾತ್ರೆಗೆ ತೆರಳಿದ್ದ ನನ್ನ ಪುತ್ರಿ ಮತ್ತು ಆಕೆಯ ಗೆಳತಿಯರಿಗೆ ಯುವಕರ ಗುಂಪೊಂದು ಶುಕ್ರವಾರ ರಾತ್ರಿ ಕಿರುಕುಳ ನೀಡಿದೆ' ಎಂದು ಕೇಂದ್ರ ಸಚಿವೆ ರಕ್ಷಾ ಖಡಸೆ ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, 'ಆರೋಪಿಗಳು ರಾಜಕೀಯ ಪಕ್ಷವೊಂದಕ್ಕೆ ಸೇರಿದವರು. ಪ್ರಕರಣ ದಾಖಲಿಸಿದ್ದು, ಕೆಲವರನ್ನು ಬಂಧಿಸಲಾಗಿದೆ' ಎಂದು ಹೇಳಿದ್ದಾರೆ.
'ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ' ಎಂದು ರಾಯಗಢದಲ್ಲಿ ಸುದ್ದಿಗಾರರಿಗೆ ಅವರು ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ರಕ್ಷಾ ಖಡಸೆ ಅವರು, 'ಈ ಬೆಳವಣಿಗೆಯು ದುರದೃಷ್ಟಕರ. ಸಂಸದೆ ಹಾಗೂ ಕೇಂದ್ರ ಸಚಿವೆಯ ಪುತ್ರಿಗೇ ಇಂತಹ ಕೆಟ್ಟ ಅನುಭವ ಆಗುವುದಾದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು' ಎಂದು ಪ್ರಶ್ನಿಸಿದ್ದಾರೆ.
'ನನ್ನ ಪುತ್ರಿ ಮತ್ತು ಅವಳ ಗೆಳತಿಯರು ಯಾತ್ರೆಗೆ ಹೋಗಿದ್ದರು. ಅವರ ಜೊತೆಗೆ ಮೂವರು ಸಿಬ್ಬಂದಿಯೂ ಇದ್ದರು. ಪುತ್ರಿ ಮತ್ತು ಆಕೆಯ ಗೆಳತಿಯರನ್ನು ಹಿಂಬಾಲಿಸಿದ ಗುಂಪು ಅವರನ್ನು ತಳ್ಳಿ, ಕಿರುಕುಳ ನೀಡಿದೆ. ಅದರ ಫೋಟೊ, ವಿಡಿಯೊ ತೆಗೆದುಕೊಂಡಿದೆ. ಆಕ್ಷೇಪಿಸಿದ ಸಿಬ್ಬಂದಿಯ ಜೊತೆಗೂ ಯುವಕರು ಅನುಚಿತವಾಗಿ ವರ್ತಿಸಿದ್ದಾರೆ. ಗೊಂದಲದ ವಾತಾವರಣ ಉಂಟಾದಾಗ, 30-40 ಜನರು ಗುಂಪುಗೂಡಿದ್ದಾರೆ' ಎಂದು ವಿವರಿಸಿದ್ದಾರೆ
ಮುಕ್ತಾಯಿನಗರ ಪೊಲೀಸ್ ಠಾಣೆಗೆ ಖುದ್ದು ತೆರಳಿ ದೂರು ದಾಖಲಿಸಿರುವ ಕೇಂದ್ರ ಸಚಿವೆಯು, 'ಕಿರುಕುಳ ನೀಡಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು' ಎಂದು ಒತ್ತಾಯಿಸಿದ್ದಾರೆ.
'ಇದೇ ಗುಂಪು ಫೆಬ್ರುವರಿ 24ರಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲೂ ಅನುಚಿತವಾಗಿ ವರ್ತಿಸಿತ್ತು ಎಂದು ನನ್ನ ಪುತ್ರಿ ತಿಳಿಸಿದ್ದಾಳೆ. ತಮ್ಮ ಮಕ್ಕಳು ಶಾಲೆಗೆ ಹೋಗುವಾಗಲೂ ಹಿಂಬಾಲಿ ಈ ಬಾಲಕರು ಕಿರುಕುಳ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ' ಎಂದೂ ಸಚಿವೆ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಅವರು, ಈ ಕುರಿತು ಮುಖ್ಯಮಂತ್ರಿ ಮತ್ತು ಡಿವೈಎಸ್‌ಪಿ ಅವರೊಂದಿಗೆ ಮಾತನಾಡಿರುವುದಾಗಿಯೂ ತಿಳಿಸಿದ್ದಾರೆ.