ನ್ಯೂಯಾರ್ಕ್: ಅಮೆರಿಕದ ವರ್ಜೀನಿಯಾ ರಾಜ್ಯದ ಸ್ಟೋರ್‌ವೊಂದರಲ್ಲಿ 56 ವರ್ಷದ ಭಾರತ ಮೂಲದ ವ್ಯಕ್ತಿ ಮತ್ತು ಅವರ 24 ವರ್ಷದ ಮಗಳನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು, ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಪ್ರದೀಪ್‌ಕುಮಾರ್ ಪಟೇಲ್ ಮತ್ತು ಅವರ ಮಗಳು ಅಕೋಮ್ಯಾಕ್ ಕೌಂಟಿಯ ಲ್ಯಾಂಕ್‌ಫೋರ್ಡ್ ಹೆದ್ದಾರಿಯಲ್ಲಿರುವ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಮಾರ್ಚ್ 20ರಂದು ಬೆಳಿಗ್ಗೆ 5:30ರ ನಂತರ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿಯ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು. ಗುಂಡೇಟಿನಿಂದ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದಾರೆ. ಕಟ್ಟಡದೊಳಗೆ ತೆರಳಿ ಪರಿಶೀಲಿಸಿದಾಗ ಮತ್ತೊಬ್ಬ ಮಹಿಳೆಗೂ ಗುಂಡು ತಗುಲಿರುವುದು ಕಂಡುಬಂದಿದೆ.
ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿದೆ. ಗುರುತು ಪತ್ತೆಯಾಗದ ಮಹಿಳೆಯನ್ನು ಸೆಂಟಾರಾ ನಾರ್ಫೋಕ್ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ಗಾಯಗೊಂಡಿದ್ದ ಅವರೂ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.
ಗುಂಡಿನ ದಾಳಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಅಕೋಮ್ಯಾಕ್ ಕೌಂಟಿ ಶೆರಿಫ್ ಕಚೇರಿ ತಡರಾತ್ರಿ ತಿಳಿಸಿದೆ.