ದೀರ್ ಅಲ್ ಬಲಾಹ್ : ಗಾಜಾಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಿಂದಾಗಿ ವಿಶ್ವಸಂಸ್ಥೆಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಯೋಜನಾ ಸೇವೆಗಳ ಕಚೇರಿ ಮುಖ್ಯಸ್ಥ ಜಾರ್ಜ್ ಮೊರೆರಾ ಡ ಸಿಲ್ವ ತಿಳಿಸಿದ್ದಾರೆ.
ಯುಎನ್‌ಒಪಿಎಸ್ ಹೆಸರಿನ ವಿಶ್ವಸಂಸ್ಥೆಯ ಯೋಜನಾ ಜಾರಿ ಸಂಸ್ಥೆಯ ಕಚೇರಿ ಇಲ್ಲಿದ್ದು, ಕೆಲವು ಕಾಮಗಾರಿಗಳನ್ನು ನಡೆಸುತ್ತಿದೆ. ಆ ಸಂದರ್ಭದಲ್ಲಿ ಸಿಬ್ಬಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಸೇನೆಯವರಿಗೆ ಇಲ್ಲಿ ವಿಶ್ವಸಂಸ್ಥೆಯ ಕಚೇರಿ ಇರುವ ಮಾಹಿತಿ ತಿಳಿದಿದೆ. ಮತ್ತೆ ಸೇನೆಯವರಿಗೆ ಇಲ್ಲಿ ನಡೆಯುತ್ತಿರುವ ಕೆಲಸಗಳ ಕುರಿತು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೃತಪಟ್ಟ ಸಿಬ್ಬಂದಿ ಯಾವ ದೇಶದವರು ಹಾಗೂ ಅವರ ಹೆಸರೇನು ಎನ್ನುವುದನ್ನು ಅವರು ಬಹಿರಂಗಪಡಿಸಲಿಲ್ಲ.
ರಕ್ಷಣಾ ಸಚಿವರ ಎಚ್ಚರಿಕೆ: ಗಾಜಾಪಟ್ಟಿಯನ್ನು ತೊರೆಯುವಂತೆ ಪ್ಯಾಲೆಸ್ಟೀನಿಯನ್ನರನ್ನು ಮತ್ತೆ ಒತ್ತಾಯಿಸಲಾಗುವುದು ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರೇಲ್ ಕಟ್ಜ್ ಹೇಳಿದ್ದಾರೆ.
'ಗಾಜಾದಲ್ಲಿ ಒತ್ತೆಯಾಳುಗಳಾಗಿ ಇರುವವರನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಹಿಂದೆಂದೂ ಕಂಡಿರದಷ್ಟು ತೀವ್ರತೆಯ ದಾಳಿ ನಡೆಸಲಾಗುತ್ತದೆ' ಎಂದು ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ.