ನ್ಯೂಯಾರ್ಕ್: ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಭಾರತ ಮೂಲದ ಸಂಶೋಧನಾ ವಿದ್ಯಾರ್ಥಿ ಬದರ್ ಖಾನ್ ಸೂರಿ ಎನ್ನುವವರನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದು, ಗಡೀಪಾರು ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಸೂರಿಯವನ್ನು ಭಾನುವಾರ ರಾತ್ರಿ ವರ್ಜೀನಿಯಾದಲ್ಲಿರುವ ಅವರ ಮನೆಯ ಹೊರಗೆ ಮುಖಗವಸು ಧರಿಸಿದ ಅಧಿಕಾರಿಗಳು ಬಂಧಿಸಿದ್ದಾರೆ.
ತಮ್ಮನ್ನು ತಾವು ಹೋಮ್‌ಲ್ಯಾಂಡ್ ಭದ್ರತಾ ಇಲಾಖೆಯ ಅಧಿಕಾರಿಗಳು ಎಂದು ಪರಿಚಯ ಮಾಡಿಕೊಂಡ ಅವರು, 'ನಿಮ್ಮ ವಿಸಾವನ್ನು ರದ್ದು ಮಾಡಲಾಗಿದೆ. ಮೊಕದ್ದಮೆ ಹೂಡಲಾಗಿದೆ' ಎಂದು ಸೂರಿಯವರಿಗೆ ತಿಳಿಸಿದ್ದಾಗಿ ಮಾಹಿತಿ ಲಭಿಸಿದೆ.
ಸೂರಿ 'ಹಮಾಸ್ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ', 'ಶಂಕಿತ ಭಯೋತ್ಪಾದಕರೊಂದಿಗೆ ನಿಕಟ ಸಂಪರ್ಕವಿದೆ' ಎನ್ನುವ ಆರೋಪ ಹೊರಿಸಲಾಗಿದೆ.
ಸೂರಿ, ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಅವರು ಹಮಾಸ್ ಪ್ರಚಾರವನ್ನು ಸಕ್ರಿಯವಾಗಿ ಹರಡುತ್ತಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಯಹೂದಿ ವಿರೋಧಿ ಪ್ರಚಾರ ಮಾಡುತ್ತಿದ್ದರು' ಎಂದು ಹೋಮ್‌ಲ್ಯಾಂಡ್ ಭದ್ರತಾ ಇಲಾಖೆಯ ಸಹಾಯಕ ಕಾರ್ಯದರ್ಶಿ ಟ್ರಿಸಿಯಾ ಮೆಕ್‌ಲಾಫ್ಲಿನ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಹಮಾಸ್‌ನ ಹಿರಿಯ ಸಲಹೆಗಾರರಾಗಿರುವ ಪರಿಚಿತ ಅಥವಾ ಶಂಕಿತ ಭಯೋತ್ಪಾದಕನೊಂದಿಗೆ ಸೂರಿ ನಿಕಟ ಸಂಪರ್ಕ ಹೊಂದಿದ್ದಾರೆ. ಸೂರಿ ಚಟುವಟಿಕೆಗಳು INA ಸೆಕ್ಷನ್ 237(a)(4)(C)(i) ಅಡಿಯಲ್ಲಿ ಗಡೀಪಾರು ಮಾಡಲು ಅರ್ಹರೆಂದು ವಿದೇಶಾಂಗ ಕಾರ್ಯದರ್ಶಿ ಮಾರ್ಚ್ 15, 2025 ರಂದು ನಿರ್ಣಯ ಹೊರಡಿಸಿದ್ದರು.
ಪತ್ನಿ ಪ್ಯಾಲೆಸ್ಟೀನ್ ಮೂಲದ ಅಮೆರಿಕದ ಪ್ರಜೆಯಾಗಿದ್ದಾರಿಂದ ಅವರು ಈ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ಸೂರಿ ಅವರ ವಕೀಲ ಹಸನ್ ಅಹ್ಮದ್ ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಪತ್ನಿ ಗಾಜಾದ ಮಾಫೆಜ್ ಸಲೇಹ್ ಅವರು ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಕಂಟೆಂಪರರಿ ಅರಬ್ ಸ್ಟಡೀಸ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ. ಅವರು ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಮಾಹಿತಿಯಲ್ಲಿ ಪದವಿ ಪಡೆದಿದ್ದಾರೆ. ಭಾರತದ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿರುವ ನೆಲ್ಸನ್ ಮಂಡೇಲಾ ಸೆಂಟರ್ ಫಾರ್ ಪೀಸ್ ಅಂಡ್ ಕಾನ್‌ಫ್ಲಿಕ್ಟ್ ರೆಸಲ್ಯೂಷನ್‌ನಿಂದ ಸಂಘರ್ಷ ವಿಶ್ಲೇಷಣೆ ಮತ್ತು ಶಾಂತಿ ನಿರ್ಮಾಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
(ವಿವಿಧ ಮೂಲಗಳನ್ನು ಆಧರಿಸಿ ಬರೆದ ಸುದ್ದಿ)