ಡೆಹ್ರಾಡೂನ್: ಉತ್ತರಾಖಂಡದಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ತರಲಾಗಿದ್ದು, ಇದರಡಿಯಲ್ಲಿ ಧಾರ್ಮಿಕ ಕೇಂದ್ರಗಳ ಬಳಿ ಇರುವ ಮದ್ಯದಂಗಡಿಗಳನ್ನು ಮುಚ್ಚುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ.
'ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಅಬಕಾರಿ ನೀತಿಗೆ ಅನುಮೋದನೆ ದೊರೆತಿದೆ.
ಹೊಸ ನೀತಿ ಜಾರಿಯಿಂದಾಗಿ ಈಗಾಗಲೇ ನೀಡಿರುವ ಮದ್ಯದಂಗಡಿ ಪರವಾನಗಿಯನ್ನು ಪುನರ್ ಪರಿಶೀಲಿಸಲಾಗುವುದು' ಎಂದು ಗೃಹ ಇಲಾಖೆ ಕಾರ್ಯದರ್ಶಿ ಶೈಲೇಶ್ ಬಗೌಲಿ ತಿಳಿಸಿದ್ದಾರೆ.
'ಹೊಸ ನೀತಿಯಡಿ ಮದ್ಯ ಮಾರಾಟ ಪರವಾನಗಿ ಹಂಚಿಕೆಗೆ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸ್ವಯಂ ಉದ್ಯೋಗ ಕಂಡುಕೊಳ್ಳ ಬಯಸುವ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಇದರೊಂದಿಗೆ ಮದ್ಯ ತಯಾರಿಕಾ ಕಂಪನಿಗಳಿಗೆ ಸ್ಥಳೀಯ ರೈತರು ತಮ್ಮ ಉತ್ಪನ್ನಗಳ ಮಾರಾಟಕ್ಕೂ ಹೊಸ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ' ಎಂದು ಅವರು ವಿವರಿಸಿದರು.
'ಮದ್ಯದ ಬಾಟಲಿಗಳ ಮೇಲೆ ನಮೂದಿಸಿದ ಗರಿಷ್ಠ ಬೆಲೆಗಿಂತ ಹೆಚ್ಚಿನ ದರ ವಸೂಲು ಮಾಡಿದರೆ, ಅಂಥ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗುವುದು. ಈ ನಿಯಮ ಡಿಪಾರ್ಟ್‌ಮೆಂಟಲ್ ಮಳಿಗೆಗಳಿಗೂ ಅನ್ವಯಿಸಲಿದೆ. ಹೊಸ ನೀತಿ ಜಾರಿಯಿಂದ 2025-26ನೇ ಸಾಲಿನಲ್ಲಿ ₹5,060 ಕೋಟಿ ಆದಾಯ ನಿರೀಕ್ಷಿಸಲಾಗುತ್ತಿದೆ. 2023-24ರಲ್ಲಿ ಅಬಕಾರಿಯಿಂದ ₹4,038 ಕೋಟಿ ಸಂಗ್ರಹವಾಗಿತ್ತು. 2024-25ರಲ್ಲಿ ಇದು ₹4,439 ಕೋಟಿಗೆ ಹೆಚ್ಚಳವಾಯಿತು' ಎಂದು ಶೈಲೇಶ್ ಬಗೌಲಿ ಮಾಹಿತಿ ನೀಡಿದ್ದಾರೆ.
'ಪರ್ವತ ರಾಜ್ಯವಾದ ಉತ್ತರಾಖಂಡದಲ್ಲಿ ವೈನ್ ತಯಾರಿಕೆ ಹೆಚ್ಚಿಸಲು ಹಣ್ಣಿನಿಂದ ತಯಾರಿಸುವ ವೈನುಗಳ ಮೇಲಿನ ಅಬಕಾರಿ ಸುಂಕಕ್ಕೆ ಮುಂದಿನ 15 ವರ್ಷಗಳ ಕಾಲ ವಿನಾಯಿತಿ ನೀಡಲಾಗಿದೆ. ಇದರಿಂದ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ರಾಜ್ಯದಲ್ಲಿ ಅಬಕಾರಿ ಉದ್ಯಮದಲ್ಲಿ ಹೂಡಿಕೆ ಆಕರ್ಷಿಸಲು ರಫ್ತು ಸುಂಕವನ್ನೂ ತಗ್ಗಿಸಲಾಗಿದೆ' ಎಂದಿದ್ದಾರೆ.