ನವದೆಹಲಿ: ಮತದಾರರ ಪಟ್ಟಿಯ ವಿವಾದದ ನಡುವೆ, ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಬಗ್ಗೆ ಚರ್ಚಿಸಲು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ನಾಡಿದ್ದು ಮಂಗಳವಾರ ಉನ್ನತ ಮಟ್ಟದ ಸಭೆ ಕರೆದಿದ್ದಾರೆ,
ಮುಖ್ಯ ಚುನಾವಣಾ ಆಯುಕ್ತರು ಮಾರ್ಚ್ 18 ರಂದು ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಶಾಸಕಾಂಗ ಇಲಾಖೆಯ ಕಾರ್ಯದರ್ಶಿ ರಾಜೀವ್ ಮಣಿ ಮತ್ತು ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಅವರೊಂದಿಗೆ ಈ ವಿಷಯವನ್ನು ಚರ್ಚಿಸಲಿದ್ದಾರೆ.
ಇದು ಚುನಾವಣಾ ಆಯೋಗದ ಹಿಂದಿನ ನಿಲುವಿಗೆ ವಿರುದ್ಧವಾಗಿದೆ. ಸೆಪ್ಟೆಂಬರ್ 2023 ರಲ್ಲಿ, ಮತದಾರರ ನೋಂದಣಿ (ತಿದ್ದುಪಡಿ) ನಿಯಮಗಳು 2022 ರ ನಿಯಮ 26-ಬಿ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
2022 ರಲ್ಲಿ, ಕೇಂದ್ರ ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜು ಲೋಕಸಭೆಗೆ ಆಧಾರ್ ನ್ನು ಚುನಾವಣಾ ಗುರುತು ಪತ್ರದೊಂದಿಗೆ ಲಿಂಕ್ ಮಾಡುವುದು ಸ್ವಯಂಪ್ರೇರಿತವಾಗಿದೆ, ಆಧಾರ್ ಸಂಖ್ಯೆ ಇಲ್ಲದೆ ಮತದಾರರನ್ನು ಸೇರಿಸುವುದರಿಂದ 'ಫಾರ್ಮ್ 6B ನಲ್ಲಿ ಒದಗಿಸಲಾದ ಇತರ ಐಚ್ಛಿಕ ದಾಖಲೆಗಳನ್ನು ಒದಗಿಸಬಹುದು ಎಂದು ಹೇಳಿದ್ದರು.
ಮತದಾರರ ಗುರುತಿನ ಚೀಟಿ ಸಂಖ್ಯೆ ನಕಲು ಮತ್ತು ಮತದಾರರ ಪಟ್ಟಿಯ ದತ್ತಾಂಶದ ವಂಚನೆಯ ಆರೋಪಗಳನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಎತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಮಂಗಳವಾರದ ಸಭೆ ಮಹತ್ವ ಪಡೆದಿದೆ.
ಚುನಾವಣಾ ಆಯೋಗದ ನಿಲುವು
ಮಾರ್ಚ್ 2 ರಂದು, ಎಲ್ಲಾ ರಾಜ್ಯಗಳ ಮತದಾರರ ಪಟ್ಟಿಯ ಅಂಕಿಅಂಶಗಳನ್ನು ERONET ಪ್ಲಾಟ್‌ಫಾರ್ಮ್‌ಗೆ ವರ್ಗಾಯಿಸುವ ಮೊದಲು ವಿಕೇಂದ್ರೀಕೃತ ಮತ್ತು ಹಸ್ತಚಾಲಿತ ಕಾರ್ಯವಿಧಾನದಿಂದಾಗಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೆಲವು ಮತದಾರರಿಗೆ ಒಂದೇ ರೀತಿಯ ಎಪಿಕ್ ಸಂಖ್ಯೆಗಳನ್ನು ನೀಡಲಾಗಿದೆ ಎಂದು ಇಸಿ ಹೇಳಿದೆ.