ಸಿಯೋಲ್: ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಮುಖ್ಯ ಸಹ ಕಾರ್ಯನಿರ್ವಾಹಕ ಹ್ಯಾನ್ ಜಾಂಗ್ ಹೀ (63) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕಂಪನಿ ಮಂಗಳವಾರ ಹೇಳಿದೆ.
ಹೃದಯಾಘಾತಕ್ಕೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಹೀ ಮೃತಪಟ್ಟಿದ್ದಾರೆ ಎಂದು ಕಂಪನಿ ಹೇಳಿದೆ. ಸ್ಯಾಮಸಂಗ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಾದ ಟಿವಿ, ಮೊಬೈಲ್ ಪೋನ್‌ಗಳ ಮೇಲ್ವಿಚಾರಣೆಯನ್ನು ಹೀ ನೋಡಿಕೊಳ್ಳುತ್ತಿದ್ದರು.
1988ರಲ್ಲಿ ಸ್ಯಾಮಸಂಗ್ ಸೇರಿದ್ದ ಹೀ ಟಿವಿಗೆ ಸಂಬಂಧಿಸಿದ ವಿಭಾಗದಲ್ಲಿ ವೃತ್ತಿ ಜೀವನದ ಹೆಚ್ಚು ಸಮಯವನ್ನು ಕಳೆದಿದ್ದಾರೆ. ಟಿವಿ ಉತ್ಪಾದಕತೆಯಲ್ಲಿ ಜಗತ್ತಿನ ಇತರ ಕಂಪನಿಗಳಿಗಿಂತ ಸ್ಯಾಮಸಂಗ್ ಮುಂಚೂಣಿಯಲ್ಲಿರುವಂತೆ ನೋಡಿಕೊಂಡಿದ್ದರು. 2022ರಲ್ಲಿ ಸಹ-ಉಪಾಧ್ಯಕ್ಷ ಮತ್ತು ಮುಖ್ಯ ಸಹ ಕಾರ್ಯನಿರ್ವಾಹಕರಾಗಿ ನೇಮಕಗೊಂಡಿದ್ದರು ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿರುವುದಾಗಿ ವರದಿಯಾಗಿದೆ.
ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಸ್ಯಾಮ್‌ಸಂಗ್ ಒಂದಾಗಿದೆ.