ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವಿನ ಸಂಖ್ಯೆ 1650ಕ್ಕೆ ಏರಿಕೆಯಾಗಿದ್ದು, 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆತೆಗಳಿವೆ ಎಂದು ವರದಿಯಾಗಿದೆ.
ಒಂದೇ ದಿನ ಎರಡು ಬಾರಿ ಭೂಕಂಪ ಸಂಭವಿಸಿದ್ದರಿಂದ ಸಾವಿರಾರು ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, 3400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಇನ್ನು ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವಶೇಷಗಳ ಅಡಿ ಹೂತು ಹೋಗಿದ್ದು, ರಕ್ಷಣಾ ಕಾರ್ಯ ಆರಂಭಿಸಲಾಗಿದೆ.
ಈಗಾಗಲೇ ಮ್ಯಾನ್ಮಾರ್ ನಡೆದ ಪ್ರಬಲ ಭೂಕಂಪಕ್ಕೆ ಭಾರತ ನೆರವಿನ ಹಸ್ತ ಚಾಚಿದ್ದು, ಆಪರೇಷನ್ ಬ್ರಹ್ಮ ಅಡಿಯಲ್ಲಿ ಭಾರತವು 60 ಟನ್ ಪರಿಹಾರ ಸಾಮಗ್ರಿಗಳೊಂದಿಗೆ ಎರಡು ಸಿ -17 ವಿಮಾನವನ್ನು ಕಳುಹಿಸಲಾಗಿದೆ.
ಭಾರತೀಯ ಸೇನೆಯು ತುರ್ತು ಆರೈಕೆ, ಆಘಾತ ಚಿಕಿತ್ಸೆ ಮತ್ತು ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸಲು 60 ಹಾಸಿಗೆಗಳ ವೈದ್ಯಕೀಯ ಚಿಕಿತ್ಸಾ ಕೇಂದ್ರವನ್ನು ಮ್ಯಾನ್ಮಾರ್ ನಲ್ಲಿ ಸ್ಥಾಪಿಸಲಾಗಿದೆ.
ಸಿ-17 ವಿಮಾನದ ಜೊತೆಗೆ, ಸಿ-130 ವಿಮಾನವು ಸಹ ನೇಪಿಟಾವ್‌ನಲ್ಲಿ ಬಂದಿಳಿದಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಯ 38 ಸಿಬ್ಬಂದಿ ಮತ್ತು 10 ಟನ್ ಪರಿಹಾರ ಸಾಮಗ್ರಿಗಳನ್ನು ತರಲಾಗಿದೆ. ಜೊತೆಗೆ 60 ಪ್ಯಾರಾ ಫೀಲ್ಡ್ ಆಂಬುಲೆನ್ಸ್ ಹೊತ್ತ ಎರಡು ಹೆಚ್ಚುವರಿ ಸಿ -17 ವಿಮಾನಗಳು ಮ್ಯಾನ್ಮಾರ್ ಗೆ ತಲುಪಲಿದೆ.
ಭಾರತ ನೆರವು ನೀಡಿದ ಬೆನ್ನಲ್ಲೇ ಮ್ಯಾನ್ಮಾರ್‌ಗೆ 12.9 ಮಿಲಿಯನ್ ಡಾಲರ್ ಮಾನವೀಯ ನೆರವು ನೀಡುವುದಾಗಿ ಯುಕೆ ಘೋಷಿಸಿದೆ. ಈ ನಿಧಿಯು ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ತುರ್ತು ಆಹಾರ, ನೀರು, ಔಷಧ ಮತ್ತು ಆಶ್ರಯವನ್ನು ಬೆಂಬಲಿಸುತ್ತದೆ ಎಂದು ಯುಕೆ ವಿದೇಶಾಂಗ ಕಚೇರಿ ತಿಳಿಸಿದೆ.
ಇನ್ನು ಥೈಲ್ಯಾಂಡ್ ನಲ್ಲಿ ಕೂಡ ಭೂಕಂಪ ಸಂಭವಿಸಿದ್ದು, ಭೂಕಂಪದ ನಂತರದ ಪರಿಹಾರ ಕಾರ್ಯಗಳಿಗಾಗಿ ಇಸ್ರೇಲಿ ವೃತ್ತಿಪರ ರಕ್ಷಣಾ ಮತ್ತು ನೆರವು ತಂಡವನ್ನು ಥೈಲ್ಯಾಂಡ್‌ಗೆ ಕಳುಹಿಸುವಂತೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೂಚನೆ ನೀಡಿದ್ದಾರೆ.
ಈ ತಂಡವು ಇಂದು ರಾತ್ರಿ 10:30 ಕ್ಕೆ ಇಸ್ರೇಲ್‌ನಿಂದ ಹೊರಡಲಿದ್ದು, 21 ವೃತ್ತಿಪರರನ್ನು ಒಳಗೊಂಡಿರುತ್ತದೆ. ಇದು ಜನಸಂಖ್ಯೆ ಆಧಾರಿತ ಮತ್ತು ಎಂಜಿನಿಯರಿಂಗ್ ರಕ್ಷಣಾ ಕಾರ್ಯಕ್ಕೆ ಸಹಾಯ ಮಾಡುತ್ತದೆ.
ಇನ್ನು ಭೂಕಂಪಪೀಡಿತ ಥೈಲ್ಯಾಂಡ್ನಿಂದ 250ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಎರಡು ಗಂಟೆಗಳ ಕಾಲ ಮನೆ, ಕಟ್ಟಡಗಳಿಂದ ಹೊರಗಿದ್ದ ಕನ್ನಡಿಗರು ಯಥಾಸ್ಥಿತಿ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.