ನವದೆಹಲಿ: ನಕಲಿ 'ಎಪಿಕ್'(EPIC) ಸಂಖ್ಯೆಗಳನ್ನು ಪತ್ತೆಹಚ್ಚಲು ಚುನಾವಣಾ ಆಯೋಗವು ತನ್ನ ಸಾಫ್ಟ್‌ವೇರ್‌ನಲ್ಲಿ ಹೊಸ ಆಯ್ಕೆಯನ್ನು ಪರಿಚಯಿಸಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮತದಾರರ ಗುರುತಿನ ಚೀಟಿಗಳು ಒಂದೇ ರೀತಿಯ 'ಎಪಿಕ್' ಸಂಖ್ಯೆಗಳನ್ನು ಹೊಂದಿರುವ ಬಗ್ಗೆ ತೃಣಮೂಲ ಕಾಂಗ್ರೆಸ್ ಇತ್ತೀಚೆಗೆ ಚುನಾವಣಾ ಆಯೋಗದ ಗಮನಕ್ಕೆ ತಂದಿತ್ತು.ಈ ವಿಚಾರ ಲೋಕಸಭೆಯಲ್ಲಿಯೂ ಚರ್ಚೆಯಾಗಿತ್ತು.
'ಹೊಸ ಆಯ್ಕೆಯು ಚುನಾವಣಾ ನೋಂದಣಿ ಅಧಿಕಾರಿಗಳಿಗೆ(ಇಆರ್‌ಒ) ನಿರ್ದಿಷ್ಟ ಎಪಿಕ್ ಸಂಖ್ಯೆಗೆ ಬಹು ಹೆಸರುಗಳನ್ನು ಲಗತ್ತಿಸಲಾಗಿದೆಯೇ ಎಂದು ಪತ್ತೆ ಮಾಡಲು ಸಹಾಯ ಮಾಡುತ್ತದೆ' ಎಂದು ಅವರು ಹೇಳಿದರು.
'ನಕಲಿ ಎಪಿಕ್ ಸಂಖ್ಯೆಗಳನ್ನು ಗುರುತಿಸುವ ಸಾಫ್ಟ್‌ವೇರ್ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ತಿಳಿಸಲಾಗಿದೆ' ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದ ಹಂಗಾಮಿ ಮುಖ್ಯ ಚುನಾವಣಾ ಅಧಿಕಾರಿ ದಿಬ್ಯೇಂದು ದಾಸ್ ಅವರು ಸೋಮವಾರ ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಈ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗಳನ್ನು ಮಾರ್ಚ್ 21 ರೊಳಗೆ ಪೂರ್ಣಗೊಳಿಸಲು ಆದೇಶಿಸಲಾಗಿದೆ ಎಂದೂ ಅವರು ಹೇಳಿದರು.