ನವದೆಹಲಿ: ವಾಣಿಜ್ಯ ತೆರಿಗೆ, ಜಿಎಸ್‌ಟಿ ಮೇಲ್ಮನವಿ ಸೇರಿದಂತೆ ಪ್ರಮುಖ ಪ್ರಕರಣಗಳ ವಿಚಾರಣಾ ಪೀಠದ ನ್ಯಾಯಮೂರ್ತಿಯಾಗಿರುವ ಯಶವಂತ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದಕ್ಕೆ ರಾಜ್ಯಸಭೆಯಲ್ಲಿ ಶುಕ್ರವಾರ ತೀವ್ರ ಕಳವಳ ವ್ಯಕ್ತವಾಯಿತು.
ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ಮಾತನಾಡಿ, 'ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿರುವುದನ್ನು ಕಂಡು ಆಘಾತವಾಯಿತು.
ನ್ಯಾಯಾಂಗದ ಹೊಣೆಗಾರಿಕೆ ಕುರಿತು ಪೀಠ ಪ್ರತಿಕ್ರಿಯಿಸಬೇಕು. ಜತೆಗೆ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ವಿರುದ್ಧದ ದೋಷಾರೋಪಣೆ ಕುರಿತು ಬಾಕಿ ಉಳಿದಿರುವ ವಿಚಾರಣೆಯನ್ನು ಮುಂದುವರಿಸಬೇಕು' ಎಂದು ಆಗ್ರಹಿಸಿದರು.
'ನ್ಯಾಯಾಂಗಕ್ಕೂ ಹೊಣೆಗಾರಿಕೆ ವಿಧಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಸಭಾಧ್ಯಕ್ಷರೇ ಹಲವು ಬಾರಿ ಹೇಳಿದ್ದಾರೆ. ಈಗ ಈ ಪ್ರಕರಣ ಸೂಕ್ಷ್ಮವಾಗಿ ಅವಲೋಕಿಸಿ, ನ್ಯಾಯಾಂಗದ ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಿಯಾದ ಯೋಜನೆ ಹೊಂದುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು' ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್, 'ಇಂಥದ್ದೊಂದು ಗಂಭೀರ ಘಟನೆ ನಡೆದಿದ್ದರೂ ಅದು ಬೇಗನೆ ಬೆಳಕಿಗೆ ಬಾರದಿರುವುದು ಕಳವಳಕಾರಿ. ಈ ವಿಷಯ ಕುರಿತು ವಿಸ್ತೃತ ಚರ್ಚೆ ನಡೆಸಲು ಅಗತ್ಯ ಸಮಯವನ್ನು ನಿಗದಿಪಡಿಸಲಾಗುವುದು' ಎಂದಿದ್ದಾರೆ.
'ಒಂದೊಮ್ಮೆ ಇದೇ ಏನಾದರೂ ರಾಜಕಾರಣಿ, ಅಧಿಕಾರಿ ಅಥವಾ ಕೈಗಾರಿಕೋದ್ಯಮಿ ಮನೆಯಲ್ಲಿ ನಡೆದಿದ್ದರೆ, ಅವರನ್ನು ತಕ್ಷಣವೇ ಗುರಿಯಾಗಿಸಲಾಗುತ್ತಿತ್ತು. ಹೀಗಾಗಿ ಜವಾಬ್ದಾರಿಯುತ, ಪಾರದರ್ಶಕ ಮತ್ತು ಪರಿಣಾಮಕಾರಿಯಾದ ವ್ಯವಸ್ಥಿತ ಪ್ರತಿಕ್ರಿಯೆ ಶೀಘ್ರದಲ್ಲಿ ಸಿಗಲಿದೆ' ಎಂದು ಹೇಳಿದರು.
'ಈ ವಿಷಯದಲ್ಲಿ ಸದನದ ಮುಖಂಡ ಮತ್ತು ವಿರೋಧಪಕ್ಷದ ನಾಯಕರನ್ನು ಆಹ್ವಾನಿಸಿ ಯೋಜನಾಬದ್ಧ ಚರ್ಚೆ ನಡೆಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುವುದು.
ಇದಕ್ಕೂ ಮೊದಲು ರಾಜ್ಯಸಭೆಯ 50 ಸದಸ್ಯರು ಸಭಾಧ್ಯಕ್ಷ ಅವರಿಗೆ ಪತ್ರ ಬರೆದು, ಕೆಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
1992ರ ಆಗಸ್ಟ್ 8ರಂದು ವಕೀಲರಾಗಿ ನೋಂದಾಯಿಸಿಕೊಂಡ ಅವರ 2014ರ ಅ. 13ರಂದು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2021ರಲ್ಲಿ ದೆಹಲಿ ಹೈಕೋರ್ಟ್‌ಗೆ ವರ್ಗಾವಣೆಗೊಂಡರು.