ಲಂಡನ್: ಸಂತೃಪ್ತಿ ಕುರಿತ 2025ನೇ ಸಾಲಿನ ಜಾಗತಿಕ ವರದಿ ಗುರುವಾರ ಪ್ರಕಟಗೊಂಡಿದ್ದು, ಭಾರತ 118ನೇ ಸ್ಥಾನದಲ್ಲಿದೆ. ಕಳೆದ ವರ್ಷ 126ನೇ ಸ್ಥಾನದಲ್ಲಿದ್ದ ಭಾರತವು ಈ ವರ್ಷ 8 ಸ್ಥಾನ ಸುಧಾರಣೆ ಕಂಡಿದ್ದರೂ, ನೇಪಾಳ, ಪಾಕಿಸ್ತಾನ, ಉಕ್ರೇನ್ ಹಾಗೂ ಪ್ಯಾಲೆಸ್ಟೀನ್‌ಗಿಂತ ಕೆಳಗಿನ ಸ್ಥಾನದಲ್ಲಿದೆ.
ಅಂತರರಾಷ್ಟ್ರೀಯ ಸಂತೃಪ್ತಿ ದಿನದಂದೇ ಈ ವರದಿ ಬಿಡುಗಡೆಯಾಗಿರುವುದು ವಿಶೇಷ. ಸತತ 8ನೇ ವರ್ಷವೂ ಫಿನ್ಲೆಂಡ್ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವೆಲ್‌ಬೀಯಿಂಗ್ ಸಂಶೋಧನಾ ಕೇಂದ್ರ ಹಾಗೂ 'ಗ್ಯಾಲಪ್' ಈ ವಾರ್ಷಿಕ ವರದಿ ತಯಾರಿಸಿವೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಜಾಲವು 2022ರಿಂದ 2024ರ ಅವಧಿಯಲ್ಲಿ ಜೀವನದ ಸ್ವಯಂಮೌಲ್ಯಮಾಪನ ಆಧರಿಸಿ ರ‍್ಯಾಂಕ್ ನೀಡಿದೆ. ದಾನ, ಸ್ವಯಂಸೇವೆ, ಅಪರಿಚಿತರಿಗೆ ನೆರವು ನೀಡಿದ್ದನ್ನು ಆಧರಿಸಿ 'ಗ್ಯಾಲಪ್' ಜಾಗತಿಕ ಮಟ್ಟದಲ್ಲಿ ಅಭಿಪ್ರಾಯ
ಸಂಗ್ರಹಿಸಿತ್ತು.
ಆರು ಬಗೆಗಳ ದಾನಪ್ರವೃತ್ತಿಯ ಸರಾಸರಿಯಲ್ಲಿ ಭಾರತವು 118ನೇ ಸ್ಥಾನ ಗಳಿಸಿದೆ. ಇಲ್ಲಿನ ಜನರು ಹೇಗೆ ದಾನ ಮಾಡಿದರು (57ನೇ ಸ್ಥಾನ), ಅಪರಿಚತರಿಗೆ ನೆರವು ನೀಡಿದರು (74), ನೆರೆಯವರ ಕೈಚೀಲವನ್ನು ಹಿಂತಿರುಗಿಸಿದರು (115ನೇ ಸ್ಥಾನ) ಎನ್ನುವುದನ್ನೂ ನಿರ್ಧರಿಸಲಾಗಿದೆ.
ಭಾರತದ ನೆರೆರಾಷ್ಟ್ರ ಅಫ್ಗಾನಿಸ್ತಾನವು (147) ಈ ಸಲವೂ ಕೊನೆಯ ಸ್ಥಾನದಲ್ಲಿದೆ. ನೇಪಾಳ 92, ಪಾಕಿಸ್ತಾನ 109, ಶ್ರೀಲಂಕಾ 133, ಬಾಂಗ್ಲಾದೇಶ 134ನೇ ಸ್ಥಾನದಲ್ಲಿವೆ. ಈ ವರ್ಷ ಚೀನಾವು 68ನೇ ಸ್ಥಾನಕ್ಕೇರಿದ್ದು, ಪ್ಯಾಲೆಸ್ಟೀನ್ 108, ಉಕ್ರೇನ್ 111ನೇ ಸ್ಥಾನ ಪಡೆದಿವೆ.