ನವದೆಹಲಿ: ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪುರುಷ ಮತ್ತು ಮಹಿಳಾ ಸ್ಪರ್ಧಿಗಳ ಭಾಗವಹಿಸುವಿಕೆಯ ವಿಷಯದಲ್ಲಿ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಹೈಕೋರ್ಟ್ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಮಾತ್ರವಲ್ಲದೆ, ದೇಶೀಯ ಅಥವಾ ಸ್ಥಳೀಯ ಅಥವಾ ಖೇಲೋ ಇಂಡಿಯಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ನ್ಯಾಯಮೂರ್ತಿ ಸಚಿನ್ ದತ್ತ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ.
ಎರಡನೇ ಖೇಲೊ ಇಂಡಿಯಾ ಪ್ಯಾರಾ ಗೇಮ್ಸ್, 2025ರ ಅಡಿಯಲ್ಲಿ ಮಹಿಳಾ ಪ್ಯಾರಾ ಅಥ್ಲೀಟ್‌ಗಳಿಗೆ ಪ್ರತಿ ಈವೆಂಟ್‌ಗೆ ಕೇವಲ ಎಂಟು ಸ್ಲಾಟ್‌ಗಳನ್ನು ಮತ್ತು ಪುರುಷ ಪ್ಯಾರಾ ಅಥ್ಲೀಟ್‌ಗಳಿಗೆ 16 ಸ್ಲಾಟ್‌ಗಳನ್ನು ನೀಡಿ ಫೆಬ್ರುವರಿ 13ರಂದು ಭಾರತೀಯ ಬ್ಯಾಡ್ಮಿಂಟನ್ ಸಂಘ (ಬಿಎಐ) ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.
'ಮಹಿಳಾ ಕ್ರೀಡಾಪಟುಗಳು ದೇಶಕ್ಕೆ ಗಮನಾರ್ಹ ಗೌರವವನ್ನು ತಂದಿದ್ದಾರೆ ಎಂಬುದು ದಾಖಲೆಯ ವಿಷಯವಾಗಿದೆ. ಕ್ರೀಡಾಕೂಟಗಳಲ್ಲಿ ಪುರುಷ ಮತ್ತು ಮಹಿಳಾ ತಂಡಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳದ ಪರಿಸ್ಥಿತಿಯನ್ನು ಈ ನ್ಯಾಯಾಲಯವು ಸಹಿಸುವುದಿಲ್ಲ' ಎಂದು ಅದು ಹೇಳಿದೆ.
ಕ್ರೀಡೆಗಳಲ್ಲಿ ಲಿಂಗ ಸಮಾನತೆಯ ತತ್ವವನ್ನು ಸಾಂವಿಧಾನಿಕ ನಿಬಂಧನೆಗಳ ಅಡಿಯಲ್ಲಿ ಮತ್ತು ಭಾರತದ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ, 2011ರ ಪ್ರಕಾರ ಕಡ್ಡಾಯಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ಆಯೋಜಿಸುವ ಕ್ರೀಡಾಕೂಟಗಳಲ್ಲಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳ ಭಾಗವಹಿಸುವಿಕೆಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಪ್ರಯತ್ನಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಈ ಮೂಲಕ ಬಿಎಐನ ಸುತ್ತೋಲೆಯನ್ನು ಪ್ರಶ್ನಿಸಿ ರಾಹುಲ್ ಕುಮಾರ್ ವರ್ಮಾ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅಂತ್ಯಗೊಳೊಸಿತು.
ಈ ಸುತ್ತೋಲೆಯು ಮಹಿಳಾ ಕ್ರೀಡಾಪಟುಗಳ ವಿರುದ್ಧ ತಾರತಮ್ಯಕ್ಕೆ ಸಮನಾಗಿದೆ ಮತ್ತು ಇದು ಭಾರತದ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ, 2011ರ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.