ಆಜೈಪುರ: ಐಐಟಿ ಬಾಬಾ ಎಂದೇ ಜನಪ್ರಿಯರಾಗಿರುವ ಅಭಯ್ ಸಿಂಗ್ ಅವರನ್ನು ರಾಜಸ್ಥಾನದ ಜೈಪುರದಲ್ಲಿ ಬಂಧಿಸಲಾಗಿದೆ ಎಂದು ಮಾಧ್ಯಮ ವರದಿ ಮಾಡಿವೆ. ಡ್ರಗ್ಸ್ ಹೊಂದಿದ್ದಕ್ಕಾಗಿ ಐಐಟಿ ಬಾಬಾ ಅವರನ್ನು ಬಂಧನ ಮಾಡಲಾಗಿತ್ತು. ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯಡಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಜೈಪುರ ಪೊಲೀಸರು ಐಐಟಿ ಪದವೀಧರ ಬಾಬಾ ಅಭಯ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಅಭಯ್ ಸಿಂಗ್ ಇದ್ದ ಸ್ಥಳವನ್ನು ಪತ್ತೆಹಚ್ಚಿದ ಶಿಪ್ರಪಥ ಪೊಲೀಸ್ ಠಾಣೆಯ ಸಿಐ ರಾಜೇಂದ್ರ ಗೋದಾರ ಅವರು ತಮ್ಮ ತಂಡದೊಂದಿಗೆ ಹೋಟೆಲ್‌ಗೆ ತಲುಪಿ ಬಾಬಾ ಅವರನ್ನು ವಶಕ್ಕೆ ಪಡೆದಿದ್ದರು.
ಹೋಟೆಲ್ ಕೊಠಡಿಯನ್ನು ಶೋಧಿಸುವಾಗ, ಪೊಲೀಸರಿಗೆ ಗಾಂಜಾ ಸೇರಿದಂತೆ ಕೆಲವು ಮಾದಕ ವಸ್ತುಗಳು ಸಿಕ್ಕಿದ್ದವು. ಇದಾದ ನಂತರ ಪೊಲೀಸರು ಬಾಬಾ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಇದೇ ವೇಳೆ ಬಾಬಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಕ್ಕೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಅವರೊಂದಿಗೆ ಪತ್ತೆಯಾದ ಡ್ರಗ್ಸ್ ಮೂಲದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಬಾಬಾ ವಿರುದ್ಧ ಈಗಾಗಲೇ ಯಾವುದಾದರೂ ಪ್ರಕರಣ ದಾಖಲಾಗಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ, ಅಭಯ್ ಸಿಂಗ್ ಅಲಿಯಾಸ್ ಐಐಟಿಯನ್ ಬಾಬಾ 'ಸ್ವಲ್ಪ ಪ್ರಸಾದ (ಗಾಂಜಾ) ಸಿಕ್ಕಿದೆ' ಎಂದು ಹೇಳುತ್ತಾರೆ. ಈ ಪ್ರಸಾದದ ಮೇಲೆ ನೀವು ಪ್ರಕರಣ ದಾಖಲಿಸಿದರೆ, ಕುಂಭಮೇಳದಲ್ಲಿ ಇಷ್ಟೊಂದು ಜನರು ಅದನ್ನು ಸೇವಿಸುತ್ತಾರೆ, ಅವರೆಲ್ಲರನ್ನೂ ಬಂಧಿಸಿ ಎಂದು ನಾನು ಪೊಲೀಸರನ್ನು ಕೇಳಿದೆ ಎಂದು ಐಐಟಿ ಬಾಬಾ ಹೇಳಿದ್ದಾರೆ.