ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎಲ್‌ಐಸಿ ಏಜೆಂಟರ ನಿಯೋಗವನ್ನು ಬುಧವಾರ ಭೇಟಿಯಾಗಿದ್ದು, ಎಲ್‌ಐಸಿ ಮತ್ತು ಐಆರ್‌ಡಿಎಐಗೆ ಸಂಬಂಧಿಸಿ ನಿಯಮಗಳಿಗೆ ಇತ್ತೀಚೆಗೆ ತಂದಿರುವ ಬದಲಾವಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
'ಈ ಬದಲಾವಣೆಯು ಬಡ ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳಿಗೆ ವಿಮೆ ಕೈಗೆಟುಕುದಂತೆ ಮಾಡುತ್ತದೆ.
ಅಲ್ಲದೆ, ಏಜೆಂಟರ ಸ್ಥಾನವನ್ನು ದುರ್ಬಲಗೊಳಿಸುತ್ತದೆ' ಎಂದು ರಾಹುಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಂಸತ್ ಭವನ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ನಿಯೋಗವನ್ನು ಭೇಟಿಯಾದ ಅವರು, 'ಎಲ್ಲ ಭಾರತೀಯರಿಗೆ ಕೈಗೆಟಕುವ ದರದಲ್ಲಿ ವಿಮೆ ಒದಗಿಸುವ ಉದ್ದೇಶದಿಂದ 1956ರಲ್ಲಿ ಎಲ್‌ಐಸಿ ರಚಿಸಲಾಗಿದೆ. ಇದು ಬಡವರಿಗೆ ಕೈಗೆಟುಕುವ ದರದಲ್ಲಿ ವಿಮೆ ಒದಗಿಸುವ ಗುರಿ ಹೊಂದಿತ್ತು. ಎಲ್‌ಐಸಿಯ ಉದ್ದೇಶವನ್ನು ರಕ್ಷಿಸಲು ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತುತ್ತೇನೆ' ಎಂದು ರಾಹುಲ್ ಗಾಂಧಿ ವಾಟ್ಸ್ ಆಯಪ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.