ಇಂಫಾಲ್: ಭದ್ರತಾ ಸಿಬ್ಬಂದಿ ಹೇರಿರುವ ನಿರ್ಬಂಧವನ್ನು ವಿರೋಧಿಸಿ ಕುಕಿ-ಜೊ ಗುಂಪು ನೀಡಿದ್ದ 'ಅನಿರ್ದಿಷ್ಟಾವಧಿ ಬಂದ್' ಕರೆ ಹಿನ್ನೆಲೆಯಲ್ಲಿ, ಮಣಿಪುರದಲ್ಲಿ ಕುಕಿ ಸಮುದಾಯದ ಪ್ರಾಬಲ್ಯವುಳ್ಳ ಪ್ರದೇಶಗಳಲ್ಲಿ ಭಾನುವಾರ ಜನಜೀವನ ಅಸ್ತವ್ಯಸ್ತಗೊಂಡಿತು.
ಶನಿವಾರ, ಕುಕಿ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವಿನ ಘರ್ಷಣೆಯಲ್ಲಿ ಒಬ್ಬರು ಮೃತಪಟ್ಟಿದ್ದರಿಂದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.
ಚುರಾಚಾಂದ್‌ಪುರ ಮತ್ತು ಟೆಂಗ್‌ನೌಪಾಲ್ ಜಿಲ್ಲೆಯಲ್ಲಿ ಪ್ರತಿಭಟನಕಾರರು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇಟ್ಟು, ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಭದ್ರತಾ ಸಿಬ್ಬಂದಿ ಕಲ್ಲುಗಳನ್ನು ತೆರವುಗೊಳಿಸಿದರು. ಭಾನುವಾರ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ಆದರೆ, ಕುಕಿ ಪ್ರಾಬಲ್ಯವುಳ್ಳ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಪೂರ್ಣ ಸ್ತಬ್ಧವಾಗಿತ್ತು. ರಸ್ತೆಗಳಲ್ಲಿ ಬೆರಳೆಣಿಕೆಯಷ್ಟು ವಾಹನಗಳಿದ್ದವು. ಜನರು ರಸ್ತೆಗೆ ಬಾರದಂತೆ ಪ್ರತಿಭಟನಕಾರರು ಮನವಿ ಮಾಡುತ್ತಿದ್ದುದು ಕಂಡುಬಂದಿತು.
ಗಮ್‌ಘಿಫೈ ಮತ್ತು ಇತರೆ ಪ್ರದೇಶಗಳು ಹಾಗೂ ಇಂಫಾಲ್-ದಿಮಾಪುರ್ ರಾಷ್ಟ್ರೀಯ ಹ ಹೆದ್ದಾರಿಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ಕ್ರಮವಾಗಿ ಹೆದ್ದಾರಿ ಗಸ್ತು ಚುರುಕುಗೊಳಿಸಲಾಗಿತ್ತು.
ರಾಜ್ಯವ್ಯಾಪ್ತಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕೇಂದ್ರ ಗೃಹ ಸಚಿವರ ಆದೇಶ ವಿರೋಧಿಸಿ ಶನಿವಾರ ಪ್ರತಿಭಟನೆ ನಡೆದಿದ್ದು, ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದು ಒಬ್ಬರು ಮೃತಪಟ್ಟಿದ್ದರು.
ಭದ್ರತಾ ಸಿಬ್ಬಂದಿಯ ಕ್ರಮವನ್ನು ಖಂಡಿಸಿ ಕುಕಿ-ಜೊ ಮಂಡಳಿ ಅನಿರ್ದಿಷ್ಟಾವಧಿ ವಾಣಿಜ್ಯ ಚಟುವಟಿಕೆ ಬಂದ್‌ಗೆ ಕರೆ ನೀಡಿದ್ದು, ದೇಶಿ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಬೆಂಬಲಿಸಿದೆ. ಐಟಿಎಲ್‌ಎಫ್ ಮುಖಂಡರು, 'ಮೈತೇಯಿ ಜನರಿಗೆ ಕುಕಿ-ಜೊ ಜನರಿರುವ ಪ್ರದೇಶಗಳಲ್ಲಿ ಸಂಚರಿಸಲು ಅವಕಾಶ ನೀಡಿದ್ದೆ ಪ್ರತಿಭಟನೆಗೆ ಕಾರಣವಾಗಿದೆ. ಪ್ರತಿಭಟನೆ ಹತ್ತಿಕ್ಕಲು ಹೆಚ್ಚುವರಿ ಭದ್ರತಾ ಸಿಬ್ಬಂದಿ ಬಳಸಲಾಗಿದೆ' ಎಂದು ಆರೋಪಿಸಿದ್ದಾರೆ.
ಮಣಿಪುರದಾದ್ಯಂತ ಮುಕ್ತ ಸಂಚಾರಕ್ಕೆ ಮಾರ್ಚ್ 8ರಿಂದ ಅವಕಾಶ ಕಲ್ಪಿಸಬೇಕು. ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮಜರುಗಿಸಿ ಎಂದು ಕೇಂದ್ರ ಗೃಹ ಸಚಿವರು ತಾಕೀತು ಮಾಡಿದ್ದರು.
ಮಣಿಪುರದಲ್ಲಿ ಮೇ 2023ರಿಂದ ಕುಕಿ ಮತ್ತು ಮೈತೇಯಿ ಸಮುದಾಯದವರ ನಡುವೆ ಜನಾಂಗೀಯ ಘರ್ಷಣೆ ನಡೆದಿದ್ದು, ಈವರೆಗೆ ಸುಮಾರು 250 ಜನರು ಮೃತಪಟ್ಟಿದ್ದಾರೆ. ಹಲವಾರು ಕುಟುಂಬಗಳು ಅತಂತ್ರವಾಗಿವೆ. ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ರಾಜೀನಾಮೆ ಬಳಿಕ ಫೆ. 13ರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.