ಇಂಫಾಲ್: ಮಣಿಪುರದಲ್ಲಿ ಮತ್ತೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು, ಚುರಾಚಾಂದ್‌ಪುರ ಜಿಲ್ಲೆಯಲ್ಲಿ ಝೋಮಿ ಮತ್ತು ಹಮರ್ ಬುಡಕಟ್ಟು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಎರಡು ಸಮುದಾಯಗಳ ಪ್ರಮುಖ ಸಂಘಟನೆಗಳ ನಡುವೆ ಶಾಂತಿ ಒಪ್ಪಂದ ಏರ್ಪಟ್ಟ ಕೆಲವೇ ತಾಸುಗಳ ನಂತರ ಮಂಗಳವಾರ ತಡರಾತ್ರಿ ಚುರಾಚಾಂದ್‌ಪುರ ಪಟ್ಟಣದಲ್ಲಿ ಕಲ್ಲುತೂರಾಟ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಟ್ಟಣದಲ್ಲಿ ಝೋಮಿ ಬಂಡುಕೋರ ಸಂಘಟನೆಯ ಧ್ವಜವನ್ನು ಗುಂಪೊಂದು ಉರುಳಿಸಲು ಯತ್ನಿಸಿರುವುದು ಮತ್ತೆ ಹಿಂಸಾಚಾರ ಭುಗಿಲೇಳಲು ಕಾರಣವಾಗಿದೆ. ಶಸ್ತ್ರಧಾರಿಗಳ ಗುಂಪುಗಳು ಕಲ್ಲು ತೂರಾಟ ನಡೆಸಿವೆ. ತಕ್ಷಣವೇ ಭದ್ರತಾ ಪಡೆ ಸಿಬ್ಬಂದಿ ಅಶ್ರುವಾಯು ಸಿಡಿಸಿ, ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಗುಂಪುಗಳನ್ನು ಚದುರಿಸಿದ್ದಾರೆ.
'ಗುಂಪಿನಲ್ಲಿದ್ದ ಕೆಲವರು ತಮ್ಮ ಎದುರಾಳಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಹಲವು ಕಡೆಗಳಲ್ಲಿ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಗುಂಪುಗಳನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಸಾಕಷ್ಟು ಪ್ರಯತ್ನ ನಡೆಸಿವೆ. ಆದರೆ, ಗುಂಡು ಹಾರಿಸಿದವರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಟ್ಟಣದಲ್ಲಿ ಭದ್ರತಾ ಪಡೆಗಳು ಗಸ್ತು ಪರೇಡ್ ನಡೆಸಿ, ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿವೆ. ಇಡೀ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಝೋಮಿ ವಿದ್ಯಾರ್ಥಿಗಳ ಒಕ್ಕೂಟವು ಜಿಲ್ಲೆಯಲ್ಲಿ ಬಂದ್‌ಗೆ ಕರೆ ನೀಡಿತು. ಚುರಾಚಾಂದ್‌ಪುರದ ಈಗಿನ ಪರಿಸ್ಥಿತಿಯಲ್ಲಿ ತುರ್ತು ಬಂದ್ ಅಗತ್ಯವಾಗಿದೆ. ತಕ್ಷಣದಿಂದಲೇ ಎಲ್ಲ ರೀತಿಯ ಚಟುವಟಿಕೆಗಳು ಸ್ಥಗಿತವಾಗಲಿವೆ ಎಂದು ವಿದ್ಯಾರ್ಥಿ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.
ಜನರಿಗೆ ಮನೆಯೊಳಗೆ ಇರುವಂತೆ ಸಲಹೆ ನೀಡಿರುವ ವಿದ್ಯಾರ್ಥಿ ಸಂಘಟನೆಯು, ಶೈಕ್ಷಣಿಕ ಸಂಸ್ಥೆಗಳು ಮತ್ತು ಅಂಗಡಿಗಳನ್ನು ಬಂದ್ ಮಾಡುವಂತೆ ಕರೆ ಕೊಟ್ಟಿದೆ.