ಇಂಫಾಲ್/ಚುರಾಚಾಂದ್‌ಪುರ: ಹಮಾರ್ ಬುಡಕಟ್ಟು ಸಮುದಾಯದ ನಾಯಕ ರಿಚರ್ಡ್ ಹಮಾರ್ ಅವರ ಮೇಲೆ ದಾಳಿ ನಡೆದ ಬಳಿಕ ಮಣಿಪುರದ ಚುರಾಚಾಂದ್‌ಪುರ ಜಿಲ್ಲೆ ಮತ್ತೊಮ್ಮೆ ಉದ್ವಿಗ್ನಗೊಂಡಿದೆ. ಪೊಲೀಸರು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
'ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಘಟನೆಗಳು ನಡೆಯುತ್ತಿವೆ.
ವಿವಿಧ ಸಮುದಾಯಗಳ ನಡುವಿನ ಶಾಂತಿಯನ್ನು ಈ ಚಟುವಟಿಕೆಗಳು ಕದಡಲಿವೆ. ರಸ್ತೆಯಲ್ಲಿ ಬಡಿಗೆಗಳನ್ನು ಹಿಡಿದು ಜನರು ಓಡಾಡುತ್ತಿದ್ದಾರೆ. ಅಂಗಡಿಗಳನ್ನು ಮುಚ್ಚುವಂತೆ ಬೆದರಿಸುತ್ತಿದ್ದಾರೆ. ಪ್ರತಿಭಟನೆಗಳೂ ನಡೆಯುತ್ತಿವೆ' ಎಂದು ಜಿಲ್ಲೆಯ ಎಸ್‌ಪಿ ಮಾಹಿತಿ ನೀಡಿದರು.
'ವಿ.ಕೆ. ಮೊಂಟೇಸರಿ ಕಾಂಪ್ಲೆಕ್ಸ್ ಒಳಗೆ ಭಾನುವಾರ ರಾತ್ರಿ 7.30ರ ಸುಮಾರಿಗೆ ರಿಚರ್ಡ್ ಅವರ ಮೇಲೆ ದಾಳಿ ನಡೆದಿದೆ' ಎಂದು ಪೊಲೀಸರು ತಿಳಿಸಿದರು. 'ರಿಚರ್ಡ್ ಅವರು ವಾಹನ ಚಾಲನೆ ಮಾಡುತ್ತಿದ್ದ ವೇಳೆ ಅವರು ದ್ವಿಚಕ್ರ ವಾಹನ ಸವಾರನಿಗೆ ಗುದ್ದಿದ್ದಾರೆ. ಈ ಬಳಿಕ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಕೆಲವರು ರಿಚರ್ಡ್ ಅವರ ಮೇಲೆ ದಾಳಿ ನಡೆಸಿದ್ದಾರೆ' ಎಂದು ಮೂಲಗಳು ಹೇಳಿವೆ.
ಹಮಾರ್ ಸಮುದಾಯದ 'ಹಮಾರ್ ಇನ್‌ಪುಯಿ' ಸಂಸ್ಥೆಯು ಘಟನೆಯನ್ನು ಖಂಡಿಸಿದೆ. 'ನಮ್ಮ ನಾಯಕನ ಮೇಲೆ ಯಾರು ದಾಳಿ ನಡೆಸಿದ್ದಾರೆ ಎನ್ನುವ ಮಾಹಿತಿ ನೀಡಿ. ಅವರನ್ನು ನಮ್ಮ ವಶಕ್ಕೆ ಒಪ್ಪಿಸಿ. ಇಲ್ಲದಿದ್ದರೆ, ನಾವೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಸಂಘ ಎಚ್ಚರಿಕೆ ನೀಡಿದೆ.