ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಮಾರ್ಚ್ 29) ಮ್ಯಾನ್ಮಾರ್‌ನ ಮಿಲಿಟರಿ ನೇತೃತ್ವದ ಸರ್ಕಾರದ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ಅವರಿಗೆ ಕರೆ ಮಾಡಿ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ( Myanmar Earthquake) ಉಂಟಾದ ಜೀವಹಾನಿಗೆ ಸಂತಾಪ ಸೂಚಿಸಿದರು.
ಇದೇ ಸಮಯದಲ್ಲಿ ನೆರೆಯ ರಾಷ್ಟ್ರವನ್ನು ಬೆಂಬಲಿಸುವ ಭಾರತದ ಬದ್ಧತೆಯನ್ನು ಮತ್ತೊಮ್ಮೆ ಹೇಳಿದರು.
ಅಲ್ಲದೆ ಈ ಕುರಿತು ಸ್ವತಃ ಮೋದಿ ಅವರೇ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆಪ್ತ ಸ್ನೇಹಿತ ಮತ್ತು ನೆರೆಯವನಾಗಿ ಭಾರತವು ಈ ಕಷ್ಟದ ಸಮಯದಲ್ಲಿ ಮ್ಯಾನ್ಮಾರ್ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ. ಆಪರೇಷನ್ ಬ್ರಹ್ಮ ಯೋಜನೆಯಡಿಯಲ್ಲಿ ವಿಪತ್ತು ಪರಿಹಾರ ಸಾಮಗ್ರಿಗಳು, ಮಾನವೀಯ ನೆರವು, ಶೋಧ ಮತ್ತು ರಕ್ಷಣಾ ತಂಡಗಳನ್ನು ಪೀಡಿತ ಪ್ರದೇಶಗಳಿಗೆ ತ್ವರಿತವಾಗಿ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭೂಕಂಪ ಪೀಡಿತ ಮ್ಯಾನ್ಮಾರ್‌ಗೆ ಸಹಾಯ ಮಾಡಲು ಭಾರತ ಮುಂದೆ ಬಂದಿದೆ. ಭಾರತವು ಆಪರೇಷನ್ ಬ್ರಹ್ಮ ಅಡಿಯಲ್ಲಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ. ವಾಯುಪಡೆಯ ಸಿ-130ಜೆ ವಿಮಾನ ಸುಮಾರು 15 ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತು ಯಾಂಗೋನ್ ತಲುಪಿದೆ. ಡೇರೆಗಳು, ಕಂಬಳಿಗಳು, ಬೇಡ್ಶಿಟ್, ಆಹಾರ ಪ್ಯಾಕೆಟ್‌ಗಳು, ನೈರ್ಮಲ್ಯ ಕಿಟ್‌ಗಳು, ಜನರೇಟರ್‌ಗಳು ಮತ್ತು ಅಗತ್ಯ ಔಷಧಿಗಳನ್ನು ಕಳುಹಿಸಲಾಗಿದೆ.
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪವು ಭಾರಿ ವಿನಾಶವನ್ನುಂಟುಮಾಡಿದೆ. ಮ್ಯಾನ್ಮಾರ್ ಒಂದರಲ್ಲೇ ಭೂಕಂಪದಲ್ಲಿ ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನೂರಾರು ಜನರು ಕಾಣೆಯಾಗಿದ್ದಾರೆ. ಈ ಭೂಕಂಪದಲ್ಲಿ ಇದುವರೆಗೆ 1500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಭಾರತವು ನೆರೆಯ ರಾಷ್ಟ್ರವಾದ ಮ್ಯಾನ್ಮಾರ್‌ಗೂ ಸಹಾಯ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾನ್ಮಾರ್‌ಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ.