ಬ್ಯಾಂಕಾಕ್: ಪ್ರಬಲ ಭೂಕಂಪದಿಂದಾಗಿ ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್‌ನಲ್ಲಿ ಸುಮಾರು ಒಂದು ಸಾವಿರ ಜನ ಪ್ರಾಣ ಕಳೆದುಕೊಂಡಿದ್ದು, ಬುದಕುಳಿದವರ ರಕ್ಷಣಾ ಕಾರ್ಯ ಯುದ್ಧೋಪಾದಿಯಲ್ಲಿ ಸಾಗಿದೆ. ಈ ಹೊತ್ತಿಗೆ ಜಗತ್ತಿನ ವಿವಿಧ ರಾಷ್ಟ್ರಗಳು ಈ ದೇಶಗಳತ್ತ ನೆರವಿನ ಹಸ್ತ ಚಾಚಿವೆ.
'ರಕ್ಷಣಾ ತಂಡವನ್ನು ಹೊತ್ತ ಭಾರತೀಯ ವಿಮಾನ ಶನಿವಾರವೇ ಮ್ಯಾನ್ಮಾರ್‌ಗೆ ಬಂದಿಳಿದಿದೆ. ಸಿ-130 ಸೇನಾ ಸರಕು ಸಾಗಣೆ ವಿಮಾನದಲ್ಲಿ ಸುರಕ್ಷತಾ ಕಿಟ್‌ಗಳು, ಹೊದಿಕೆ, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಕಳುಹಿಸಲಾಗಿದೆ. ಇದೇ ನಿಯೋಗದಲ್ಲಿ ರಕ್ಷಣಾ ತಂಡ ಮತ್ತು ವೈದ್ಯರು ಪ್ರಯಾಣಿಸಿದ್ದಾರೆ' ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಚೀನಾದ ತುರ್ತು ನಿರ್ವಹಣಾ ಸಚಿವಾಲಯದ 82 ಸದಸ್ಯರ ತಂಡವನ್ನು ಮ್ಯಾನ್ಮಾರ್‌ಗೆ ಚೀನಾ ಶನಿವಾರ ಕಳುಹಿಸಿದೆ. ವಿಶೇಷ ರಕ್ಷಣಾ ತಂಡವನ್ನು ಮ್ಯಾನ್ಮಾರ್‌ನ ವಾಣಿಜ್ಯ ಪ್ರದೇಶ ಯಾಂಗಾನ್‌ಗೆ ಚೀನಾ ಕಳುಹಿಸಿದೆ ಎಂದು ಸಿಸಿಟಿವಿ ವರದಿ ಮಾಡಿದೆ.
ಇದರೊಂದಿಗೆ ಮಾನವೀಯ ನೆಲೆಯಲ್ಲಿ ತುರ್ತು ನಿಧಿಯಾಗಿ ಮ್ಯಾನ್ಮಾರ್‌ಗೆ ₹118 ಕೋಟಿ ನೆರವನ್ನು ಚೀನಾ ನೀಡಿದೆ. ಇದರೊಂದಿಗೆ ಅಗತ್ಯ ವಸ್ತುಗಳನ್ನು ಸೋಮವಾರದಿಂದ ಚೀನಾ ಕಳುಹಿಸಲಿದೆ ಎಂದು ವರದಿಯಾಗಿದೆ.
ಹಾಂಗ್‌ಕಾಂಗ್ 51 ಜನರ ರಕ್ಷಣಾ ತಂಡವನ್ನು ಮ್ಯಾನ್ಮಾರ್‌ಗೆ ಕಳುಹಿಸಿದೆ. ಇದರೊಂದಿಗೆ ಅವಶೇಷಗಳಡಿ ಸಿಲುಕಿದವರ ಪತ್ತೆಗೆ ಶ್ವಾನ ದಳ, ಸಿಲುಕಿರುವವರ ಪತ್ತೆಗೆ ಬಳಸುವ ಡಿಟೆಕ್ಟರ್ ಸೇರಿದಂತೆ 9 ಟನ್ ಅಗತ್ಯ ವಸ್ತುಗಳನ್ನು ಕಳುಹಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಭೂಕಂಪದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳನ್ನು ದುಬೈನಲ್ಲಿರುವ ತನ್ನ ದಾಸ್ತಾನು ಘಟಕದಿಂದ ಕಳುಹಿಸಲಾಗುತ್ತಿದೆ. ಜತೆಗೆ ತುರ್ತು ನಿರ್ವಹಣಾ ತಂಡವನ್ನು ಸಜ್ಜುಗೊಳಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
'ಭೂಕಂಪ ನಿರ್ವಹಣಾ ತಂಡದೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಇದು ದೊಡ್ಡ ದುರಂತ. ಜೀವ ಮತ್ತು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ' ಎಂದು ಸಂಸ್ಥೆಯ ವಕ್ತಾರೆ ಮಾರ್ಗರೇಟ್ ಹ್ಯಾರಿಸ್ ತಿಳಿಸಿದ್ದಾರೆ.
'ಇದೊಂದು ದೊಡ್ಡ ದುರಂತ. ನಾವು ಭೂಕಂಪ ಪೀಡಿತ ಪ್ರದೇಶಗಳಿಗೆ ನೆರವಾಗುತ್ತೇವೆ. ಸರ್ಕಾರದ ಮಟ್ಟದಲ್ಲಿ ಈ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಐರೋಪ್ಯ ರಾಷ್ಟ್ರಗಳು ₹23 ಕೋಟಿ ಆರ್ಥಿಕ ನೆರವನ್ನು ಭೂಕಂಪ ಪೀಡಿತ ರಾಷ್ಟ್ರಗಳಿಗೆ ನೀಡುತ್ತಿರುವುದಾಗಿ ಹೇಳಿವೆ.
ಮಲೇಷ್ಯಾ ಕೂಡಾ ವಿಪತ್ತು ನಿರ್ವಹಣಾ ತಂಡವನ್ನು ಕಳುಹಿಸುತ್ತಿರುವುದಾಗಿ ಹೇಳಿದೆ.
ಭೂಕಂಪ ಪೀಡಿತ ಪ್ರದೇಶದಲ್ಲಿ ತುರ್ತು ಕಾರ್ಯಗಳನ್ನು ಕೈಗೊಳ್ಳಲು ದಕ್ಷಿಣ ಕೊರಿಯಾ ಸರ್ಕಾರವು ₹17 ಕೋಟಿ ಆರ್ಥಿಕ ನೆರವು ನೀಡುತ್ತಿರುವುದಾಗಿ ಹೇಳಿದೆ.
ನ್ಯೂಜಿಲ್ಯಾಂಡ್ ಸರ್ಕಾರವು ₹9 ಕೋಟಿ ನೆರವನ್ನು ತುರ್ತು ನಿರ್ವಹಣೆಗಾಗಿ ಅಂತರರಾಷ್ಟ್ರೀಯ ರೆಡ್ ಕ್ರಾಸ್‌ಗೆ ನೀಡುವುದಾಗಿ ಹೇಳಿದೆ.