ಮುಂಬೈ: ನಾಗ್ಪುರ ಕೋಮು ಗಲಭೆ ಪ್ರಕರಣದ ಪ್ರಮುಖ ಆರೋಪಿ ಎಂದು ಶಂಕಿಸಲಾದ ಫಾಹೀಮ್ ಖಾನ್‌ಗೆ ಸೇರಿದ ಎರಡು ಅಂತಸ್ತಿನ ಮನೆಯನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ.
ನಾಗ್ಪುರ ನಗರ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ಫಾಹೀಮ್ ಖಾನ್ ಮನೆಯ ಅನಧಿಕೃತ ಭಾಗವನ್ನು ಕೆಡವಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಾಗ್ಪುರದ ಯಶೋಧರ ನಗರ ಪ್ರದೇಶದ ಸಂಜಯ್ ಬಾಗ್ ಕಾಲೋನಿಯಲ್ಲಿರುವ ಮನೆ ಫಾಹೀಮ್ ಅವರ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಲೆಗಾಂವ್ ಮೂಲದ ಮತ್ತು ಸ್ಥಳೀಯ ರಾಜಕೀಯ ಮುಖಂಡರಾಗಿರುವ ಫಾಹೀಮ್ ಖಾನ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಕಳೆದ ವಾರ ಪೊಲೀಸರು ಬಂಧಿಸಿದ್ದರು.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್ ಸಮಾಧಿಯನ್ನು ತೆರವು ಮಾಡುವಂತೆ ಆಗ್ರಹಿಸಿ ಬಲಪಂಥೀಯ ಸಂಘಟನೆಗಳು (ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ) ಈಚೆಗೆ ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ಸಮಾಧಿ ಪ್ರತಿಕೃತಿಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಪ್ರತಿಭಟನೆಯಲ್ಲಿ ಸಮುದಾಯವೊಂದರ ಪವಿತ್ರ ಗ್ರಂಥಕ್ಕೆ ಬೆಂಕಿ ಹಾಕಲಾಗಿದೆ ಎಂಬ ವದಂತಿ ಹರಡಿದ ನಂತರ ನಾಗ್ಪುರದ ಮಹಲ್ ಪ್ರದೇಶದ ಚಿಟನಿಸ್ ಪಾರ್ಕ್‌ನಲ್ಲಿ ಮಾರ್ಚ್ 17ರಂದು ಹಿಂಸಾಚಾರ ನಡೆದಿತ್ತು. ನೂರಾರು ಜನರ ಗುಂಪು ಪೊಲೀಸರತ್ತ ಕಲ್ಲು ತೂರಾಟ ನಡೆಸಿ, ಕೆಲವೆಡೆ ಪೆಟ್ರೋಲ್ ಬಾಂಬ್ ಎಸೆದಿತ್ತು.
ನಂತರ ಹಂಸಪುರಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಉದ್ರಿಕ್ತ ಗುಂಪು ಹಲವು ವಾಹನಗಳಿಗೆ ಬೆಂಕಿ ಇಟ್ಟಿತ್ತು. ಆ ಪ್ರದೇಶದ ಮನೆಗಳು ಮತ್ತು ಕ್ಲಿನಿಕ್‌ಗಳಿಗೆ ಬೆಂಕಿ ಇಟ್ಟು, ಧ್ವಂಸಗೊಳಿಸಿತ್ತು ಎಂದು ಪೊಲೀಸರು ತಿಳಿಸಿದ್ದರು.
ಹಿಂಸಾಚಾರದಲ್ಲಿ ಮೂವರು ಉಪ ಪೊಲೀಸ್ ಆಯುಕ್ತರು ಸೇರಿ 33 ಪೊಲೀಸ್ ಸಿಬ್ಬಂದಿ ಹಾಗೂ ಐವರು ನಾಗರಿಕರು ಗಾಯಗೊಂಡಿದ್ದರು.
'ನಾಗ್ಪುರ ಹಿಂಸಾಚಾರದಲ್ಲಿ ಹಾನಿಗೊಳಗಾದ ಸಾರ್ವಜನಿಕ ಆಸ್ತಿಗಳ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲಾಗುವುದು. ಹಣ ಪಾವತಿಸಲಿಲ್ಲ ಎಂದಾದರೆ ಅಂಥವರ ಆಸ್ತಿಗಳನ್ನು ಮಾರಾಟ ಮಾಡಿ ಅಥವಾ ಜಪ್ತಿ ಮಾಡಿ ಹಣ ಪಡೆಯಲಾಗುವುದು' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶನಿವಾರ ಹೇಳಿದ್ದರು.
ಹಿಂಸಾಚಾರ ನಡೆದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಾಗ್ಪುರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
'ಪರಿಸ್ಥಿತಿಗೆ ತುಪ್ಪ ಸುರಿಯುವ ಕೆಲಸ ಮಾಡಿದ ಸಾಮಾಜಿಕ ಜಾಲತಾಣಗಳ 68 ಖಾತೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಅಳಿಸಿ ಹಾಕಲಾಗಿದೆ. ಇಂಥ ಪೋಸ್ಟ್‌ಗಳನ್ನು ಹಂಚಿಕೊಂಡವರನ್ನೂ ಆರೋಪಿಗಳನ್ನಾಗಿ ಮಾಡಲಾಗುವುದು. ಹಿಂಸಾಚಾರದಲ್ಲಿ ವಿದೇಶಿಯರ ಅಥವಾ ಬಾಂಗ್ಲಾದೇಶಿಯರ ಕೈವಾಡವಿದೆ ಎಂಬುದರ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ' ಎಂದು ಗೃಹ ಸಚಿವರೂ ಆಗಿರುವ ಫಡಣವೀಸ್ ಹೇಳಿದ್ದರು.