ಮುಂಬೈ: 'ದಬ್ಬಾಳಿಕೆ ಹಾಗೂ ಅತ್ಯಾಚಾರದ ಮನಸ್ಥಿತಿಯನ್ನು ಕೊನೆಗಾಣಿಸಲು ಮಹಿಳೆಯರಿಗೆ ಶಿಕ್ಷೆಯಿಲ್ಲದ ಒಂದು ಕೊಲೆ ಮಾಡಲು ಅವಕಾಶ ನೀಡಬೇಕು' ಎಂದು ಎನ್‌ಸಿಪಿ (ಶರದ್ ಪವಾರ್) ಪಕ್ಷದ ನಾಯಕಿ ರೋಹಿಣಿ ಖಡಸೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ರೋಹಿಣಿ ಅವರು ಎನ್‌ಸಿಪಿ (ಎಸ್‌ಪಿ) ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದಾರೆ. ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ ಖಡಸೆ ಅವರ ಮಗಳು. ಕೇಂದ್ರ ಸಚಿವೆ ರಕ್ಷಾ ಖಡಸೆ ಅವರ ನಾದಿನಿ.
ಜಲಗಾಂವ್‌ನ ಕೊಥಾಲಿ ಗ್ರಾಮದಲ್ಲಿ ಇತ್ತೀಚಿಗೆ ಸಂತ ಮುಕ್ತಾಯಿ ಯಾತ್ರೆಗೆ ತೆರಳಿದ್ದ ಕೇಂದ್ರ ಸಚಿವೆ ರಕ್ಷಾ ಖಡಸೆ ಅವರ ಪುತ್ರಿ, ಆಕೆಯ ಗೆಳತಿಯರಿಗೆ ಬಾಲಕರ ಗುಂಪು ಕಿರುಕುಳ ನೀಡಿತ್ತು. ಇದರ ಬೆನ್ನಲ್ಲೇ, ರೋಹಿಣಿ ಈ ಹೇಳಿಕೆ ನೀಡಿದ್ದಾರೆ.
'ನಾವು ಎಲ್ಲ ಮಹಿಳೆಯರ ಪರವಾಗಿ ಒಂದು ಕೊಲೆ ಮಾಡಲು ವಿನಾಯಿತಿ ನೀಡಬೇಕು ಎಂದು ಕೋರುತ್ತಿದ್ದೇವೆ' ಎಂದಿದ್ದಾರೆ.
'ಇಡೀ ವಿಶ್ವದಲ್ಲೇ ಭಾರತವು ಮಹಿಳೆಯರಿಗೆ ಅಸುರಕ್ಷಿತ ದೇಶವಾಗಿದ್ದು, ಅಪರಹರಣ, ಕೌಟುಂಬಿಕ ಹಿಂಸೆಯಿಂದ ನಲುಗುತ್ತಿದ್ದಾರೆ' ಎಂದು ಸಮೀಕ್ಷಾ ವರದಿಯೊಂದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ಕಾನೂನು ಹಾಗೂ ಸುವ್ಯವಸ್ಥೆಯ ಅಸಮರ್ಥವಾಗಿದ್ದು, ಗಂಭೀರವಾಗಿ ಪರಿಗಣಿಸಿದರೆ ನಮ್ಮ ಬೇಡಿಕೆಯನ್ನು ಈಡೇರಿಸಬಹುದು' ಎಂದು ವಿವರಿಸಿದ್ದಾರೆ.