ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಲೆ ದಾಳಿ ನಡೆಸಿ ಒತ್ತೆಯಾಳುಗಳಾಗಿ ಇರಿಸಿಕೊಂಡ ಪ್ರಯಾಣಿಕರ ಪಕ್ಕದಲ್ಲಿ ದಾಳಿಕೋರರು ಬಾಂಬ್‌ಗಳುಳ್ಳ ಜಾಕೆಟ್ ಧರಿಸಿ ಕುಳಿತಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಆತ್ಮಾಹುತಿ ಬಾಂಬರ್‌ಗಳಿಂದಾಗಿ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಜಟಿಲವಾಗಿದೆ ಎಂದು ತಿಳಿದುಬಂದಿದೆ.
ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದಿಂದ ಪೆಶಾವರಕ್ಕೆ ತೆರಳುತ್ತಿದ್ದ ಒಂಬತ್ತು ಬೋಗಿಗಳಿರುವ ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸುಮಾರು 400ಕ್ಕೂ ಜನರು ಸಂಚರಿಸುತ್ತಿದ್ದರು. ಗಡಾಲರ್ ಮತ್ತು ಪೆಹ್ರೊ ಕುನ್ರಿ ಕಣಿವೆ ಪ್ರದೇಶದ ಸಮೀಪದ ಸುರಂಗದಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿದ್ದರು.
ದಾಳಿಯ ಹೊಣೆ ಹೊತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ), 'ಹಳಿ ತಪ್ಪಿಸಿ ರೈಲನ್ನು ವಶಕ್ಕೆತೆಗೆದುಕೊಳ್ಳಲಾಗಿದೆ. ರೈಲಿನ ಕರ್ತವ್ಯನಿರತ ಸಿಬ್ಬಂದಿ ಸೇರಿ ಪ್ರಯಾಣಿಕರನ್ನು ಒತ್ತೆ ಇರಿಸಿಕೊಳ್ಳಲಾಗಿದೆ' ಎಂದು ಹೇಳಿಕೊಂಡಿತ್ತು.
ಪಾಕಿಸ್ತಾನ ಭದ್ರತಾ ಪಡೆ ಸದ್ಯ 155 ಜನರನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪಾಕ್ ಸರ್ಕಾರ ಹೇಳಿದೆ.
ಭದ್ರತಾ ಪಡೆಗಳ ಸಹಾಯದಿಂದ ಸುರಕ್ಷಿತವಾಗಿ ಹೊರಬಂದ ಮೊಹಮ್ಮದ್ ಆಶ್ರಿಫ್ ಎನ್ನುವ ಪ್ರಯಾಣಿಕ ಮಾತನಾಡಿ, 'ಜನರ ಮೇಲೆ ಏಕಾಏಕಿ ದಾಳಿ ನಡೆಯಿತು, ಕೆಲವರು ಗಾಯಗೊಂಡರೆ, ಇನ್ನೂ ಕೆಲವು ಪ್ರಯಾಣಿಕರನ್ನು ಹತ್ಯೆ ಮಾಡಲಾಗಿದೆ' ಎಂದು ಹೇಳಿದ್ದಾರೆ.
ರೈಲಿನಲ್ಲಿ ಒತ್ತೆಯಾಳಾಗಿರುವ ವ್ಯಕ್ತಿಯ ತಾಯಿಯೊಬ್ಬರು ಮಾತನಾಡಿ, 'ನಿಮಗೆ ರೈಲನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಅವುಗಳನ್ನು ಸಂಚಾರವನ್ನು ರದ್ದುಗೊಳಿಸಿ, ಈಗ ನನ್ನ ಮಗನನ್ನು ವಾಪಸ್ ತಂದುಕೊಡಿ' ಎಂದು ಗೋಳಾಡಿದ್ದಾರೆ.
ಭದ್ರತಾ ಅಧಿಕಾರಿಗಳು ಪ್ರಯಾಣಕ್ಕೆ ಸುರಕ್ಷಿತವಾಗಿದೆ ಎಂದು ಹೇಳುವವರೆಗೂ ಪಂಜಾಬ್, ಸಿಂಧ್ ಪ್ರಾಂತ್ಯದಿಂದ ಬಲೂಚಿಸ್ತಾನಕ್ಕೆ ತೆರಳುವ ಎಲ್ಲಾ ರೈಲುಗಳನ್ನು ರದ್ದುಗೊಳಿಸಿ ಪಾಕಿಸ್ತಾನ ರೈಲ್ವೆ ಆದೇಶಿಸಿದೆ.