ಪಾಟ್ನಾ: ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗೆ ನಡೆದ ಚುನಾವಣೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಭರ್ಜರಿ ಜಯ ಸಾಧಿಸಿದ್ದು, 107 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ 'ಮಹಿಳಾ ಅಧ್ಯಕ್ಷೆ' ಆಯ್ಕೆಯಾಗಿದ್ದಾರೆ.
ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯ ಫಲಿತಾಂಶಗಳು ತಡರಾತ್ರಿ ಘೋಷಣೆಯಾಗಿದ್ದು, ಈ ಬಾರಿ, PUSU ನ 107 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಒಬ್ಬ ವಿದ್ಯಾರ್ಥಿನಿ ಅಧ್ಯಕ್ಷೆ ಹುದ್ದೆಯನ್ನು ಗೆದ್ದಿದ್ದಾರೆ. ಎಬಿವಿಪಿಯ ಮೈಥಿಲಿ ಮೃಣಾಲಿನಿ ಅಧ್ಯಕ್ಷೆ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿ, ಐದು ಪ್ರಮುಖ ಸ್ಥಾನಗಳ ಪೈಕಿ, ಮೂರು ಹುದ್ದೆಗಳು ವಿದ್ಯಾರ್ಥಿನಿಯರ ಪಾಲಾಗಿದೆ. ಸ್ವತಂತ್ರ ಅಭ್ಯರ್ಥಿ ಸಲೋನಿ ರಾಜ್ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು, NSUI ನ ಸೌಮ್ಯ ಶ್ರೀವಾಸ್ತವ ಖಜಾಂಚಿ ಹುದ್ದೆಯನ್ನು, ಸ್ವತಂತ್ರ ಅಭ್ಯರ್ಥಿ ಧೀರಜ್ ಉಪಾಧ್ಯಕ್ಷ ಹುದ್ದೆಯನ್ನು ಮತ್ತು NSUI ನ ರೋಹನ್ ಕುಮಾರ್ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಗೆದ್ದಿದ್ದಾರೆ.
ನಾವು ಮೂಲಭೂತ ವಿಷಯಗಳ ಮೇಲೆ ಕೆಲಸ ಮಾಡುತ್ತೇವೆ
ಗೆಲುವಿನ ನಂತರ, ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾದ ಮೈಥಿಲಿ ಮೃಣಾಲಿನಿ ಮಾತನಾಡಿ, 'ಸಾಧ್ಯವಾದಷ್ಟು ಬೇಗ ಕೆಲಸವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಮೊದಲನೆಯದಾಗಿ ನಾವು ಮೂಲಭೂತ ವಿಷಯಗಳ ಮೇಲೆ ಕೆಲಸ ಮಾಡುತ್ತೇವೆ. ಶೀಘ್ರದಲ್ಲೇ ಪೊಲೀಸರು ಮತ್ತು ಆಡಳಿತವನ್ನು ಭೇಟಿ ಮಾಡುತ್ತೇನೆ. ಆರಂಭ ಚೆನ್ನಾಗಿದ್ದರೆ ಅಂತ್ಯವೂ ಚೆನ್ನಾಗಿರುತ್ತದೆ.