ಪುಣೆ: ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಕೃತ್ಯಗಳಲ್ಲಿ ಮರಣದಂಡನೆ ವಿಧಿಸಲು ಅವಕಾಶವುಳ್ಳ ಶಕ್ತಿ ಮಸೂದೆಯನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಲಿ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಆಗ್ರಹಪಡಿಸಿವೆ.
ಇಲ್ಲಿನ ಸ್ವಾರ್ಗೇಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಘಟನೆ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.
ಅತ್ಯಾಚಾರದಂತ ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸಲು ಅನುವಾಗುವಂತೆ ಶಕ್ತಿ ಮಸೂದೆ ಜಾರಿಗೊಳಿಸುವಂತೆ ಒತ್ತಾಯಿಸಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿ (ಎಸ್‌ಪಿ) ನಾಯಕ ಅನಿಲ್ ದೇಶ್‌ಮುಖ್ 'ಎಂವಿಎ ಸರ್ಕಾರವಿದ್ದಾಗ ನಾಲ್ಕು ವರ್ಷಗಳ ಹಿಂದೆ ಶಾಸನಸಭೆಯು ಮಸೂದೆಯನ್ನು ಅಂಗೀಕರಿಸಿದೆ. ಕೇಂದ್ರ ಸರ್ಕಾರದ ಅನುಮೋದನೆ ಬಾಕಿ ಇದೆ' ಎಂದು ತಿಳಿಸಿದರು.
'ಶಕ್ತಿ ಮಸೂದೆ ಜಾರಿಗೊಳಿಸದಿರುವುದು ಮಹಾಯುತಿ ಸರ್ಕಾರದ ವೈಫಲ್ಯ' ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಟೀಕಿಸಿದ್ದಾರೆ.
ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತಿಲ್ಲ. ಮಾ.3ರಿಂದ ಆರಂಭವಾಗುವ ಅಧಿವೇಶನದಲ್ಲೇ ಮರು ಪ್ರಸ್ತಾಪಿಸಿ ಮಸೂದೆ ಜಾರಿಗೆ ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.