ಮುಂಬೈ: 'ಮರಾಠಿಯು ಮುಂಬೈನ ಭಾಷೆಯಾಗಿದೆ. ಹೊರಗಿನಿಂದ ಬಂದ ಅನ್ಯಭಾಷಿಗರು ಇದನ್ನು ಅರಿಯಬೇಕು' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖಂಡ ಸುರೇಶ್ ಭಯ್ಯಾಜಿ ಜೋಶಿ ಹೇಳಿದ್ದಾರೆ.
ಮುಂಬೈನ ಘಟ್ಕೋಪರ್ ಪ್ರದೇಶದಲ್ಲಿ ಮಾತನಾಡಿದ ಅವರು, 'ಮರಾಠಿಯು ನನ್ನ ಮಾತೃಭೂಮಿಯ ಭಾಷೆಯಾಗಿದೆ. ಅದರ ಕುರಿತು ನನಗೆ ಹೆಮ್ಮೆ ಇದೆ' ಎಂದಿದ್ದಾರೆ.
'ಮುಂಬೈನಲ್ಲಿ ನೆಲೆಸಿರುವ ಅನ್ಯಬಾಷಿಗರು ಮರಾಠಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಯಸುವುದು ಸಹಜ. ಮುಂಬೈಗೆ ಒಂದು ಭಾಷೆ ಎಂಬುದಿಲ್ಲ. ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿನ ಜನರು ಗುಜರಾತಿ ಭಾಷೆಯನ್ನು ಹೆಚ್ಚು ಮಾತನಾಡುತ್ತಾರೆ. ಆದರೆ ಮರಾಠಿಯನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು' ಎಂದಿದ್ದಾರೆ.
ಜೋಶಿ ಮಾತನಾಡಿರುವ ಈ ಹೇಳಿಕೆಗೆ ಶಿವಸೇನಾ (ಯುಬಿಟಿ) ಹಾಗೂ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
'ಮರಾಠಿಯು ಮಹಾರಾಷ್ಟ್ರ ಹಾಗೂ ಮುಂಬೈನ ಭಾಷೆಯಾಗಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಹಲವು ಭಾಷಿಗರು ಮುಂಬೈನಲ್ಲಿ ಅತ್ಯಂತ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ' ಎಂದು ವಿರೋಧ ಪಕ್ಷಗಳ ಮುಖಂಡರು ಹೇಳಿದ್ದಾರೆ.