ಬೆಂಗಳೂರು: 'ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಕುರಿತ ಕಳವಳ ಹಿಂದೆ ಅವರಿಗೆ ರಾಜಕೀಯ ಕಾರ್ಯಸೂಚಿ ಇದೆಯೇ ಅಥವಾ ಅದು ನೈಜ ಕಳಕಳಿಯೇ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಪ್ರಶ್ನಿಸಿದ್ದಾರೆ.
ಆರ್‌ಎಸ್‌ಎಸ್ 'ಅಖಿಲ ಭಾರತೀಯ ಪ್ರತಿನಿಧಿ ಸಭಾ'ದಲ್ಲಿ ಮಾತನಾಡಿದ ಅವರು, 'ತಮಿಳುನಾಡಿನ ಮುಖ್ಯಮಂತ್ರಿ ಆಹ್ವಾನದ ಮೇರೆಗೆ ದಕ್ಷಿಣ ಭಾರತದ ರಾಜ್ಯಗಳ ಪ್ರತಿನಿಧಿಗಳು ಚೆನ್ನೈನಲ್ಲಿ ಸಭೆ ಸೇರಿ, ಕ್ಷೇತ್ರ ಮರುವಿಂಗಡನೆಯ ಸಾಧಕ ಭಾದಕಗಳ ಕುರಿತು ಚರ್ಚಿಸಿದ್ದಾರೆ.
ಅದನ್ನು ಎದುರಿಸಲು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಅಂಥ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಹಾಗಿದ್ದರೆ ಇವರ ಕಳಕಳಿ ನೈಜವೇ ಅಥವಾ ಅದರ ಹಿಂದೆ ಅವರ ರಾಜಕೀಯ ಕಾರ್ಯಸೂಚಿ ಇದೆಯೇ ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದಿದ್ದಾರೆ.
'ಜನಗಣತಿಯೇ ಆರಂಭವಾಗಿಲ್ಲ. ಜತೆಗೆ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಈವರೆಗೂ ಆರಂಭಿಸಿಲ್ಲ. ಅದಕ್ಕೆ ಬೇಕಿರುವ ಕಾಯ್ದೆಯೂ ರೂಪುಗೊಂಡಿಲ್ಲ. ಕ್ಷೇತ್ರ ಮರುವಿಂಗಡನೆಯು ದೇಶದಲ್ಲಿ ಸಾಂವಿಧಾನಿಕ ಪ್ರಕ್ರಿಯೆ. ಜತೆಗೆ ಪ್ರಜಾಪ್ರಭುತ್ವದ ಆಧಾರದಲ್ಲೇ ಚುನಾವಣೆಗಳು ನಡೆಯುತ್ತಿವೆ. 2002ರಲ್ಲಿ ಕಾಯ್ದೆ ರೂಪುಗೊಂಡ ನಂತರ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆ ನಡೆದಿದೆ. ಅದಕ್ಕೂ ಪೂರ್ವದಲ್ಲಿ 1972ರಲ್ಲಿ ಇಂಥ ಪ್ರಕ್ರಿಯೆ ನಡೆದಿತ್ತು. 2002ರ ಪ್ರಕ್ರಿಯೆ ಅಡಿಯಲ್ಲೇ ಲೋಕಸಭಾ ಕ್ಷೇತ್ರಗಳು ನಿಗದಿಗೊಂಡಿವೆ' ಎಂದು ಅರುಣ್ ಕುಮಾರ್ ಹೇಳಿದ್ದಾರೆ.
'ಹೀಗಿದ್ದರೂ ಅನಗ್ಯ ಗೊಂದಲ ಮೂಡಿಸುವ ಕೆಲಸವನ್ನು ನಿಲ್ಲಿಸಬೇಕು. ಪರಸ್ಪರ ನಂಬಿಕೆ ಮತ್ತು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದೇ ಪ್ರಜಾಪ್ರಭುತ್ವದ ಆತ್ಮ. ಈ ಕುರಿತು ಸ್ಟಾಲಿನ್ ಮತ್ತು ಅವರ ತಂಡ ಆಲೋಚಿಸಬೇಕು' ಎಂದಿದ್ದಾರೆ.
ಭಾಷಾ ವಿವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಭಾರತದ ಎಲ್ಲಾ ಭಾಷೆಗಳ ಸಮಾನ ಸ್ಥಾನಮಾನ ಹೊಂದಿವೆ. ನಾವೆಲ್ಲರೂ ಒಂದೇ, ನಮ್ಮ ದೇಶ ಒಂದೇ ಅದುವೇ ನಮ್ಮ ಅನನ್ಯತೆ. ಆದರೆ ಆಹಾರ, ಧರ್ಮ ಮತ್ತು ಭಾಷೆ ಎಂಬುದು ಜನರನ್ನು ವಿಭಜಿಸುವ ಉಪಕರಣಗಳಾಗದೇ, ನಮ್ಮನ್ನು ಸೇರಿಸುವಂತಾಗಬೇಕು' ಎಂದಿದ್ದಾರೆ.