ಮಾಸ್ಕೊ: ತನ್ನ ಕರ್ಸ್ಕ್ ಗಡಿ ಪ್ರದೇಶದಲ್ಲಿ ಉಕ್ರೇನ್ ಸೇನೆಯನ್ನು ಹಿಮ್ಮೆಟ್ಟಿಸಿ ಎರಡು ಗ್ರಾಮಗಳನ್ನು ಮರುವಶಪಡಿಸಿಕೊಳ್ಳಲಾಗಿದೆ ಎಂದು ರಷ್ಯಾ ಶನಿವಾರ ಹೇಳಿದೆ.
ಉಕ್ರೇನ್ ಸೇನೆಯು ಪ್ರತಿ ಆಕ್ರಮಣದಲ್ಲಿ ವಶಪಡಿಸಿಕೊಂಡಿರುವ ಕರ್ಸ್ಕ್ ಪ್ರದೇಶದ ಬಹುಭಾಗವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ರಷ್ಯಾ ಸೇನೆಯು ಆಕ್ರಮಣವನ್ನು ತೀವ್ರಗೊಳಿಸಿದೆ.
ಈ ವಾರದಲ್ಲಿ ಮರುವಶಪಡಿಸಿಕೊಂಡಿರುವ ಮುಖ್ಯ ಪಟ್ಟಣವಾದ ಸುಡ್ಜಾದ ಉತ್ತರ ಮತ್ತು ಪಶ್ಚಿಮದಲ್ಲಿರುವ ಝಾವೊಲೆಶೆಂಕಾ ಹಾಗೂ ರುಬನ್ಸ್‌ಚಿನಾ ಗ್ರಾಮಗಳ ಮೇಲೆ ಸೇನಾ ಪಡೆಗಳು ನಿಯಂತ್ರಣ ಸಾಧಿಸಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.
ಉಕ್ರೇನ್ ಸೇನೆಯು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ನಕ್ಷೆಯಲ್ಲಿ, ತನ್ನ ಸೇನಾ ಪಡೆಗಳು ಪಶ್ಚಿಮದ ಗಡಿಯತ್ತ ಹಿಮ್ಮೆಟ್ಟಿರುವುದನ್ನು ತೋರಿಸಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಶುಕ್ರವಾರವಷ್ಟೇ, ಕರ್ಸ್ಕ್‌ನಲ್ಲಿರುವ ಉಕ್ರೇನ್ ಸೈನಿಕರಿಗೆ ಶರಣಾಗಲು ಸೂಚಿಸಿ, ಶಸ್ತ್ರಾಸ್ತ್ರ ತ್ಯಜಿಸಿದರೆ ಗೌರವದಿಂದ ನಡೆಸಿಕೊಳ್ಳುವುದಾಗಿಯೂ ಹೇಳಿದ್ದರು. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ ಸೈನಿಕರನ್ನು ಕೊಲ್ಲಬಾರದು ಎಂದು ಪುಟಿನ್‌ಗೆ ಒತ್ತಾಯಿಸಿದ್ದರು.
'ಕರ್ಸ್ಕ್‌ನಲ್ಲಿ ಪರಿಸ್ಥಿತಿಯು ನಿಸ್ಸಂಶಯವಾಗಿ ತುಂಬಾ ಕಠಿಣವಾಗಿದೆ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಶುಕ್ರವಾರ ಹೇಳಿದ್ದರು.