ಸಂಭಲ್: ನವೆಂಬರ್ 24ರ ಹಿಂಸಾಚಾರ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳಲು ಇಲ್ಲಿನ ಶಾಹಿ ಜಮಾ ಮಸೀದಿಯ ಅಧ್ಯಕ್ಷ ಝಫರ್ ಅಲಿಯವರನ್ನು ಸ್ಥಳೀಯ ಪೊಲೀಸ್‌ನ ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ.
ಮೊಘಲರ ಕಾಲದ ಈ ಮಸೀದಿಯನ್ನು ಹಳೆಯ ಹಿಂದೂ ದೇಗುಲವನ್ನು ಒಡೆದು ನಿರ್ಮಿಸಲಾಗಿದೆ ಎನ್ನುವ ವಾದ ಇದೆ.
ಮಸೀದಿಯ ಅಧ್ಯಕ್ಷರನ್ನು ಬಂಧಿಸಲಾಗಿದೆಯೇ ಎಂದು ಪಿಟಿಐ ಕೇಳಿದ ಪ್ರಶ್ನೆಗೆ, 'ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಎಸ್‌ಐಟಿ ವಶಕ್ಕೆ ಪಡೆದಿದೆ' ಎಂದು ಸಂಭಲ್ ಕೊತ್ವಾಲಿ ಉಸ್ತುವಾರಿ ಅನುಜ್ ಕುಮಾರ್ ತೋಮರ್ ಹೇಳಿದ್ದಾರೆ.
ನವೆಂಬರ್ 24ರ ಹಿಂಸಾಚಾರಕ್ಕೆ ಸಂಬಂಧಿಸಿಯೇ ಅವರನ್ನು ವಶಕ್ಕೆ ಪಡೆಯಲಾಗಿದೆಯೇ ಎನ್ನುವ ಪ್ರಶ್ನೆಗೆ, ಅದರ ಸಂಬಂಧ ವಿಚಾರಣೆ ನಡೆಸಲು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಮಸೀದಿಯನ್ನು ಸಮೀಕ್ಷೆ ನಡೆಸಬೇಕು ಎಂದು ಕೋರ್ಟ್ ಆದೇಶ ಮಾಡಿದ ಬಳಿಕ ಕಳೆದ ವರ್ಷ ನವೆಂಬರ್ 24ರಂದು ಸಂಭಲ್‌ನಲ್ಲಿ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಪೊಲೀಸ್ ಸಿಬ್ಬಂದಿ ಸೇರಿ ಹಲವರು ಗಾಯಗೊಂಡಿದ್ದಾರೆ.