ನವದೆಹಲಿ: ಇಂಗಾಲ ಹೊರಸೂಸುವಿಕೆ ಮೇಲೆ ನಿಯಂತ್ರಣ ಇರಬೇಕು, ಶುದ್ಧ ಇಂಧನ ತಂತ್ರಜ್ಞಾನದ ಮೇಲೆ ಹೆಚ್ಚಿನ ಹೂಡಿಕೆ ಆಗಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮನಾಥ್ ಶನಿವಾರ ಹೇಳಿದರು.
ಬೆಳೆಯುವ ಮಕ್ಕಳು ಹೊರಗೆ ಆಟವಾಡುವಾಗ ಮಾಸ್ಕ್ ಧರಿಸಬೇಕಾದ ಸ್ಥಿತಿಯನ್ನು ಸೃಷ್ಟಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಆರ್ಥಿಕ ಬೆಳವಣಿಗೆ ಹಾಗೂ ಪರಿಸರದ ಒಳಿತಿನ ನಡುವೆ ಸಮತೋಲನ ಸಾಧಿಸುವ ಮಾರ್ಗಗಳನ್ನು ಅನ್ವೇಷಿಸುವ ಅಗತ್ಯ ಇದೆ ಎಂದೂ ಹೇಳಿದರು.
ಸರ್ಕಾರದ ನೀತಿಗಳು ಪರಿಸರಸ್ನೇಹಿ ತಂತ್ರಜ್ಞಾನದ ಮೇಲೆ ಗಮನ ನೀಡಬೇಕು ಎಂದು 'ವಿಜ್ಞಾನ ಭವನ'ದಲ್ಲಿ ಶನಿವಾರ ನಡೆದ ಪರಿಸರದ ಕುರಿತ ರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಹೇಳಿದರು.
'ದೇಶದ ರಾಜಧಾನಿಯು ತೀವ್ರ ಪ್ರಮಾಣದ ಮಾಲಿನ್ಯವನ್ನು ಮತ್ತೆ ಮತ್ತೆ ಎದುರಿಸುತ್ತಿರುತ್ತದೆ... ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸಲು, ಪರಿಸರ ಪೂರಕವಾದ ತಂತ್ರಜ್ಞಾನಗಳ ಮೇಲೆ ಹೂಡಿಕೆ ಮಾಡಲು, ಉಸಿರಾಡುವ ಗಾಳಿಯನ್ನು ಹಾಳುಮಾಡದೆಯೇ ಆರ್ಥಿಕ ಬೆಳವಣಿಗೆಗೆ ಅವಕಾಶ ನೀಡುವ ಸುಸ್ಥಿರ ಸಾರಿಗೆ ಆಯ್ಕೆಗಳ ಬಗ್ಗೆ ಆಲೋಚಿಸಲು ನಾವು ಒಂದಾಗಬೇಕು ಎಂಬುದನ್ನು ಇದು ಹೇಳುತ್ತಿದೆ' ಎಂದು ಅವರು ಹೇಳಿದರು.