ಇಂಫಾಲ್: 'ನಾಗರಿಕರು ಸಂವಿಧಾನಕ್ಕೆ ಬದ್ಧರಾದಲ್ಲಿ ಮಣಿಪುರದ ಈಗಿನ ಸವಾಲುಗಳಿಂದ ಹೊರಬರುವುದು ಸಾಧ್ಯ' ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ಕೋಟೀಶ್ವರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
'ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ನ್ಯಾಯಮೂರ್ತಿಗಳ ನಿಯೋಗವು ಮಣಿಪುರದ ಚುರಾಚಾಂದ್‌ಪುರ ಮತ್ತು ಬಿಷ್ಣುಪುರ್‌ಗೆ ಭೇಟಿ ನೀಡಿದ್ದ ಅವಧಿಯಲ್ಲಿ ಜನರು ಆಶಾವಾದ ವ್ಯಕ್ತಪಡಿಸಿರುವುದನ್ನು ಗಮನಿಸಿದ್ದೇವೆ' ಎಂದರು.
ಮಣಿಪುರ ಹೈಕೋರ್ಟ್‌ನ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 'ಸಣ್ಣ ರಾಜ್ಯ ಮಣಿಪುರಕ್ಕೆ ಸವಾಲುಗಳಿವೆ. ಅದೃಷ್ಟವಶಾತ್, ನಾವು ಸಂಕಷ್ಟದಲ್ಲಿ ಮಾರ್ಗದರ್ಶನ ನೀಡುವ ಸಂವಿಧಾನವನ್ನು ಹೊಂದಿದ್ದೇವೆ' ಎಂದರು.
'ಚುರಾಚಾಂದ್‌ಪುರವು ಶ್ರೀಮಂತ ಸಂಪ್ರದಾಯ, ಭಿನ್ನ ಸಮುದಾಯವನ್ನು ಹೊಂದಿದೆ. ಇಂಫಾಲ್‌ನ ಹಲವು ಜನರು ಇಲ್ಲಿಗೆ ಬರುತ್ತಾರೆ. ಮಣಿಪುರ ಹೈಕೋರ್ಟ್‌ಗೆ ಇಬ್ಬರು ನ್ಯಾಯಮೂರ್ತಿಗಳನ್ನು ಈ ನೆಲ ನೀಡಿದೆ' ಎಂದರು.
'ಜನರು ದೇಶವನ್ನು ಬಲಪಡಿಸಲು ಆದಷ್ಟೂ ನೆರವಾಗಬೇಕು, ದುರ್ಬಲಗೊಳಿಸಲು ಅಲ್ಲ' ಎಂದು ಹೇಳಿದರು.
ಶನಿವಾರ ಮಣಿಪುರಕ್ಕೆ ತೆರಳಿದ್ದ ನ್ಯಾಯಮೂರ್ತಿಗಳ ನಿಯೋಗವು ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ್ದು, ಅಲ್ಲಿನ ನಿವಾಸಿಗಳ ಜೊತೆಗೂ ಸಂವಹನ ನಡೆಸಿ ಅಭಿಪ್ರಾಯ ಆಲಿಸಿತು.