ನವದೆಹಲಿ: ಸಂಸತ್‌ನ ಹೊರಗೆ ಪ್ರತಿಭಟನೆ ನಡೆಸಿದ ಡಿಎಂಕೆ, ವಿಸಿಕೆ ಹಾಗೂ ಕಾಂಗ್ರೆಸ್‌ನ ತಮಿಳುನಾಡಿನ ಸಂಸದರು ಟಿ-ಶರ್ಟ್ ಹಾಗೂ ಮಫ್ಲರ್‌ಗಳನ್ನು ಧರಿಸಿ ಲೋಕಸಭೆ ಹಾಗೂ ರಾಜ್ಯಸಭೆಗೆ ಹಾಜರಾದರು. ಇದಕ್ಕೆ ಲೋಕಸಭಾಧ್ಯಕ್ಷ ಓಂಬಿರ್ಲಾ ಹಾಗೂ ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಆಕ್ಷೇಪ ವ್ಯಕ್ತಪಡಿಸಿದರು.
ಇದು ಸದನದ ನಿಯಮಗಳು ಹಾಗೂ ಕಾರ್ಯವಿಧಾನಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ತಿಳಿಸಿದರು.
ಟಿ-ಶರ್ಟ್‌ಗಳ ಮೇಲೆ '#ನ್ಯಾಯಯುತ ಕ್ಷೇತ್ರ ಮರುವಿಂಗಡಣೆಗಾಗಿ ತಮಿಳುನಾಡು ಹೋರಾಡಲಿದೆ. ತಮಿಳುನಾಡು ಗೆಲ್ಲಲಿದೆ' ಎಂದು ಬರೆಯಲಾಗಿತ್ತು. ಆದರೆ, ಮಫ್ಲರ್‌ಗಳ ಮೇಲೆ 'ಅನಾಗರಿಕ, ಪ್ರಜಾಪ್ರಭುತ್ವ ವಿರೋಧಿ' ಎಂದು ಬರೆಯಲಾಗಿತ್ತು.
ಸದನ ಸೇರಿದ ತಕ್ಷಣ, ರಾಜಕೀಯ ಘೋಷಣೆಗಳನ್ನು ಹೊಂದಿರುವ ಟಿ-ಶರ್ಟ್ ಮತ್ತು ಮಫ್ಲರ್‌ಗಳನ್ನು ಧರಿಸಿದ ಸಂಸದರ ಉಪಸ್ಥಿತಿಯನ್ನು ಬಿರ್ಲಾ ಆಕ್ಷೇಪಿಸಿದರು. 'ಸದನವು ನಿಯಮಗಳು ಮತ್ತು ಕಾರ್ಯವಿಧಾನಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಸದಸ್ಯರು ಸದನದ ಘನತೆ ಮತ್ತು ಗೌರವ ಕಾಪಾಡಬೇಕು. ಆದರೆ, ಕೆಲವು ಸಂಸದರು ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ಸ್ವೀಕಾರಾರ್ಹವಲ್ಲ' ಎಂದು ಹೇಳಿದರು.
'ಎಷ್ಟೇ ದೊಡ್ಡ ನಾಯಕರಾಗಿದ್ದರೂ ಇಂತಹ ಅಗೌರವದ ಉಡುಪುಗಳನ್ನು ಧರಿಸಿ ಸದನಕ್ಕೆ ಬರುವುದು ಸರಿಯಲ್ಲ. ಸದನದಿಂದ ಹೊರಗೆ ಹೋಗಿ ಈ ಬಟ್ಟೆಗಳನ್ನು ಬದಲಾಯಿಸಿ ಮತ್ತು ಸೂಕ್ತ ಉಡುಪಿನೊಂದಿಗೆ ಹಿಂತಿರುಗಿ' ಎಂದು ಸದಸ್ಯರಿಗೆ ಓಂಬಿರ್ಲಾ ಸೂಚಿಸಿದರು. ಜತೆಗೆ, ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು.
ಕಲಾಪ ಪುನರಾರಂಭಗೊಂಡಾಗ ಈ ಸದಸ್ಯರು ಟಿ-ಶರ್ಟ್ ಹಾಗೂ ಮಫ್ಲರ್‌ಗಳನ್ನು ಧರಿಸಿಯೇ ಬಂದಿದ್ದರು. ಟಿ ಶರ್ಟ್‌ಗಳನ್ನು ಬದಲಾಯಿಸಿ ಬರುವಂತೆ ಸಭಾಧ್ಯಕ್ಷರ ಪೀಠದಲ್ಲಿದ್ದ ಕೃಷ್ಣಪ್ರಸಾದ್ ಟೆನ್ನೇಟಿ ಮನವಿ ಮಾಡಿದರು. ಇದಕ್ಕೆ ಸದಸ್ಯರು ಕಿವಿಗೊಡಲಿಲ್ಲ. ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದೂಡಿದರು. ನಂತರ ಶುಕ್ರವಾರದ ವರೆಗೆ ಮುಂದೂಡಿದರು. ಡಿಎಂಕೆ ಸದಸ್ಯರು ಸ್ಪೀಕರ್ ರೂಲಿಂಗ್ ಅನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿಯ ಕೆಲವು ಸಂಸದರು ದೂರಿದರು.
ತಮ್ಮ ಕೊಠಡಿಯಲ್ಲಿ ಸದನ ನಾಯಕರ ಸಭೆಯನ್ನು 11.30ಕ್ಕೆ ಕರೆದಿರುವುದಾಗಿ ಪ್ರಕಟಿಸಿದ ಧನಕರ್ ಅವರು ರಾಜ್ಯಸಭಾ ಕಲಾಪವನ್ನು 12 ಗಂಟೆವರೆಗೆ ಮುಂದೂಡಿದರು. ಸದನದ ನಾಯಕರ ಸಭೆಯಲ್ಲಿ ಒಮ್ಮತ ಮೂಡದ ಕಾರಣಕ್ಕೆ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.