ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಮಾಜಿ ಮುಖ್ಯಸ್ಥ ಲಲಿತ್ ಮೋದಿ (Lalit Modi) ಬೇರೊಂದು ದೇಶದ ಪೌರತ್ವ ಪಡೆದಿದ್ದು, ಇದೀಗ ಅವರು ತಮ್ಮ ಭಾರತೀಯ ಪೌರತ್ವವನ್ನು ವಾಪಸ್ ನೀಡಿದ್ದಾರೆ ಎಂದು ಹೇಳಲಾಗಿದೆ.
ಹೌದು.. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರು ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಒಪ್ಪಿಸಲು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ಶುಕ್ರವಾರ ಇದನ್ನು ದೃಢಪಡಿಸಿದೆ ಎನ್ನಲಾಗಿದೆ.
‘ಲಂಡನ್‌ನ ಭಾರತದ ಹೈಕಮಿಷನ್ ಕಚೇರಿಯಲ್ಲಿ ತಮ್ಮ ಪಾಸ್‌ಪೋರ್ಟ್ ಒಪ್ಪಿಸಲು ಅವರು ಅರ್ಜಿ ಸಲ್ಲಿಸಿದ್ದಾರೆ’ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
‘ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾರ್ಯವಿಧಾನಗಳ ಅಡಿಯಲ್ಲಿ ಮನವಿಯನ್ನು ಪರಿಶೀಲಿಸಲಾಗುವುದು. ಅವರು ವನವಾಟುವಿನ ಪೌರತ್ವವನ್ನು ಪಡೆದುಕೊಂಡಿದ್ದಾರೆ ಎಂದು ನಮಗೆ ತಿಳಿಸಲಾಗಿದೆ. ಕಾನೂನಿನಡಿಯಲ್ಲಿನಾವು ಅವರ ವಿರುದ್ಧ ಪ್ರಕರಣವನ್ನು ಮುಂದುವರಿಸುತ್ತೇವೆ’ಎಂದು ಅವರು ಹೇಳಿದ್ದಾರೆ.
ಕೇಸ್ ಇಲ್ಲ.. ವಿಚಾರಣೆ ಇಲ್ಲ.. ಕೊನೆಗೆ Tax ಕೂಡ ಇಲ್ಲ ಆ ದೇಶದಲ್ಲಿ..
ಮೂಲಗಳ ಪ್ರಕಾರ ಲಲಿತ್ ಮೋದಿ, ದಕ್ಷಿಣ ಪೆಸಿಫಿಕ್ ದ್ವೀಪ ರಾಷ್ಟ್ರವಾದ ವನವಾಟುವಿನ ಪೌರತ್ವವನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಭಾರತೀಯ ತನಿಖಾ ಸಂಸ್ಥೆಗಳು ಆರ್ಥಿಕ ಅಪರಾಧಿ ಎಂದು ಘೋಷಿಸಿರುವ ಮೋದಿ, ಪೆಸಿಫಿಕ್ ಮಹಾಸಾಗರದ ದ್ವೀಪ ರಾಷ್ಟ್ರವಾದ ವನವಾಟುವಿನ (Vanuatu) ಪೌರತ್ವವನ್ನು ಪಡೆದಿದ್ದಾರೆ. ಅವರು 2010ರಲ್ಲಿ ಭಾರತವನ್ನು ತೊರೆದು ಲಂಡನ್‌ನಲ್ಲಿ ವಾಸಿಸುತ್ತಿದ್ದರು.
ವನವಾಟು ಏಕೆ?
ಲಲಿತ್ ಮೋದಿ ವನವಾಟು ದೇಶವನ್ನೇ ಏಕೆ ಆಯ್ಕೆ ಮಾಡಿಕೊಂಡರು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಭಾರತೀಯ ಕಾನೂನಿನಿಂದ ತಪ್ಪಿಸಿಕೊಳ್ಳುವುದಷ್ಟೇ ಅಲ್ಲ, ಬಹುಶಃ ವನವಾಟುವಿನ "ಗೋಲ್ಡನ್ ಪಾಸ್‌ಪೋರ್ಟ್" ಕೂಡ ಕಾರಣವಿರಬಹುದು ಎನ್ನಲಾಗುತ್ತಿದೆ. ವನವಾಟು ದೇಶವು "ಗೋಲ್ಡನ್ ಪಾಸ್‌ಪೋರ್ಟ್" ಎಂಬ ಯೋಜನೆಯನ್ನು ಹೊಂದಿದ್ದು, ಇದರಲ್ಲಿ ಶ್ರೀಮಂತರು ಹಣ ಕೊಟ್ಟು ಪೌರತ್ವವನ್ನು ಪಡೆಯಬಹುದು.ವನವಾಟುವಿನಲ್ಲಿ ಯಾವುದೇ ವೈಯಕ್ತಿಕ ತೆರಿಗೆ ಇಲ್ಲ. ಅಂದರೆ ನೀವು ಎಲ್ಲಿಯೇ ಸಂಪಾದಿಸಿದರೂ ವನವಾಟು ಸರ್ಕಾರಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಇದೇ ಕಾರಣಕ್ಕೆ ಲಲಿತ್ ಮೋದಿ ವನವಾಟು ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಳ್ಳ ಹಿಡಿಯುತ್ತಾ ಐಪಿಎಲ್ ಹಗರಣದ ವಿಚಾರಣೆ?
ಇನ್ನು ಐಪಿಎಲ್‌ನ ಅಧ್ಯಕ್ಷರಾಗಿದ್ದಾಗ ಕೋಟ್ಯಂತರ ರೂಪಾಯಿಗಳ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿ, ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉಪಾಧ್ಯಕ್ಷ ಹುದ್ದೆಯನ್ನು ಅಲಂಕರಿಸುವಾಗ ಲಲಿತ್ ಮೋದಿ ಅವರ ಮೇಲೆ ಬಿಡ್ಡಿಂಗ್ ಅಕ್ರಮಗಳು ಮತ್ತು ಹಣ ವರ್ಗಾವಣೆ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (ಫೆಮಾ) ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿತ್ತು. ಲಲಿತ್ ಮೋದಿ ಅವರು ಮುಂಬೈನಲ್ಲಿ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿಚಾರಣೆಯಲ್ಲಿ ಒಮ್ಮೆ ಮಾತ್ರ ಹಾಜರಾಗಿದ್ದರು. ಮೇ 2010ರಲ್ಲಿ, ಅವರು ದೇಶದಿಂದ ಪಲಾಯನ ಮಾಡಿ ಬ್ರಿಟನ್ ಗೆ ಪರಾರಿಯಾಗಿದ್ದರು.
2009ರಲ್ಲಿ, ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳಿಂದಾಗಿ, ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ವರ್ಗಾಯಿಸಬೇಕಾಯಿತು. 2010 ರ ಐಪಿಎಲ್ ಫೈನಲ್ ನಂತರ, ಪುಣೆ ಮತ್ತು ಕೊಚ್ಚಿ ಎಂಬ ಎರಡು ಹೊಸ ಫ್ರಾಂಚೈಸಿಗಳ ಬಿಡ್ಡಿಂಗ್‌ನಲ್ಲಿ ದುರುಪಯೋಗ, ಅಶಿಸ್ತು ಮತ್ತು ಆರ್ಥಿಕ ಅಕ್ರಮಗಳ ಆರೋಪದ ಮೇಲೆ ಲಲಿತ್ ಮೋದಿಯನ್ನು ಬಿಸಿಸಿಐನಿಂದ ಅಮಾನತುಗೊಳಿಸಲಾಯಿತು. ಲಲಿತ್ ಮೋದಿ ಅವರ ಮೇಲೆ ಆರ್ಥಿಕ ದುರುಪಯೋಗ ಮತ್ತು ಕಚೇರಿಯಿಂದ ಅನಧಿಕೃತ ಹಣ ವರ್ಗಾವಣೆ ಆರೋಪವಿದೆ.